ಹರಪನಹಳ್ಳಿ : ತಾಲೂಕಿನ ಅನಂತನಹಳ್ಳಿಯಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಬಸ್ಸುಗಳ ಸಮಯ ಬದಲಾವಣೆ ಮಾಡುವಂತೆ ಆಗ್ರಹಿಸಿ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್ಡಿಎಂಸಿ) ಪದಾಧಿಕಾರಿಗಳು ಹಾಗೂ ಪೋಷಕರು ಸೋಮವಾರ ಹರಪನಹಳ್ಳಿ ಕೆಎಸ್ಆರ್ಟಿಸಿ ಘಟಕ ವ್ಯವಸ್ಥಾಪಕರಿಗೆ ಜಂಟಿಯಾಗಿ ಮನವಿ ಪತ್ರ ಸಲ್ಲಿಸಿದರು.
ಶಾಲೆಗೆ 6ನೇ ತರಗತಿಯಿಂದ 10ನೇ ತರಗತಿಯವರೆಗೆ ತಾಲೂಕಿನ ಸುಮಾರು 45 ಹಳ್ಳಿಗಳಿಂದ ಒಟ್ಟು 555 ವಿದ್ಯಾರ್ಥಿಗಳು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದಾಖಲಾಗಿದ್ದು, ಪ್ರತಿದಿನ ಬಸ್ ಮೂಲಕವೇ ವಿದ್ಯಾಭ್ಯಾಸಕ್ಕೆ ಆಗಮಿಸುತ್ತಿದ್ದಾರೆ. ಈ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತಿದಿನ ಸಂಜೆ 4:20ಕ್ಕೆ ಹರಪನಹಳ್ಳಿ ಡಿಪೋದಿಂದ 3 ಬಸ್ಸುಗಳನ್ನು ಬಿಡುವಂತೆ ಜೂನ್ 2023ರಲ್ಲಿ ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶರು ಅಂದಿನ ಘಟಕ
ವ್ಯವಸ್ಥಾಪಕರಾದ ಶ್ರೀ ವಿನಾಯಕ ಸ್ವಾಮಿ ಸಾಲಿಮಠ ಅವರಿಗೆ ಆದೇಶಿಸಿದ್ದರು.
ಅದರಂತೆ 2023-24ನೇ ಶೈಕ್ಷಣಿಕ ವರ್ಷದಿಂದ 2025-26ನೇ ಶೈಕ್ಷಣಿಕ ವರ್ಷದವರೆಗೂ ನಿರಂತರವಾಗಿ 3 ಬಸ್ಸುಗಳು ಬರುತ್ತಿದ್ದವು. ಆದರೆ, ಪ್ರಸ್ತುತ ಡಿಪೋದಿಂದ ಏಕಾಏಕಿ ಕೇವಲ 1 ಬಸ್ಸನ್ನು ಮಾತ್ರ ಕಳುಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಇದು 555 ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಾಲೆಗೆ ಸಾಕಾಗುವುದಿಲ್ಲ. ಆದ್ದರಿಂದ ನ್ಯಾಯಾಧೀಶರ ಆದೇಶದಂತೆ ಮರಳಿ 3 ಬಸ್ಸುಗಳನ್ನು ಪ್ರತಿದಿನ ಸಂಜೆ 4:20ಕ್ಕೆ
ಕಳುಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಮಯ ಬದಲಾವಣೆ ಹಾಗೂ ನಿಲುಗಡೆಗೆ ಆಗ್ರಹ : ನೀಲಗುಂದ, ಇಟ್ಟಿಗೂಡಿ, ಕುಂಚೂರು, ಅರಸನಾಳು
ಮಾರ್ಗವಾಗಿ ಹಲವಾಗಲು ಗ್ರಾಮಕ್ಕೆ ತೆರಳುವ ಬಸ್ ಸಂಜೆ 4:00 ಗಂಟೆಗೆ ಶಾಲೆಯ ಮುಂಭಾಗದಲ್ಲಿ ಬರುತ್ತದೆ. ಆದರೆ ಶಾಲೆ ಬಿಡುವ ಸಮಯ 4:20 ಆಗಿರುವುದರಿಂದ, ಈ ಬಸ್ಸಿನ ಸಮಯವನ್ನು 4:20 ನಿಮಿಷಕ್ಕೆ ಬದಲಾಯಿಸಿ ಶಾಲೆಯ ಬಳಿ ಬರಲು ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ವಿನಂತಿಸಿದ್ದಾರೆ.
ಜೊತೆಗೆ, ಹರಪನಹಳ್ಳಿ – ಹಡಗಲಿ ಮಾರ್ಗದಲ್ಲಿ ಸಂಚರಿಸುವ ಬಹುತೇಕ ಬಸ್ಸುಗಳು ಕೂಲಹಳ್ಳಿ ಕ್ರಾಸ್, ಬಂಡ್ರಿ, ಎರಡೆತ್ತಿನಹಳ್ಳಿ ಹಾಗೂ ಕಾನಹಳ್ಳಿ ಗ್ರಾಮಗಳಿಗೆ ನಿಲುಗಡೆ ಮಾಡುತ್ತಿಲ್ಲ. ಈ ಮಾರ್ಗದಲ್ಲಿ ನಿತ್ಯ 30 ರಿಂದ 35 ವಿದ್ಯಾರ್ಥಿಗಳು ಓಡಾಡುತ್ತಿದ್ದು, ಈ ಮಕ್ಕಳಿಗೆ ಅನುಕೂಲ ಮಾಡಿಕೊಡಲು ಮುಂಜಾನೆ ಮತ್ತು ಸಂಜೆ ಈ ಬಸ್ಸುಗಳಿಗೆ ನಿಲುಗಡೆ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ.
ಮನವಿಯ ಪ್ರಮುಖ ಅಂಶಗಳು :
* 555 ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನ್ಯಾಯಾಧೀಶರ ಆದೇಶದಂತೆ ಪ್ರತಿದಿನ ಸಂಜೆ 4:20ಕ್ಕೆ 3 ಬಸ್ಸುಗಳನ್ನು ಒದಗಿಸಬೇಕು.
* ಹಲವಾಗಲು ಬಸ್ಸಿನ ಸಮಯವನ್ನು ಅಲ್ಪ ಬದಲಾವಣೆ ಮಾಡಿ ಸಂಜೆ 4:20ಕ್ಕೆ ನಿಗದಿಪಡಿಸಬೇಕು.
* ಹರಪನಹಳ್ಳಿ – ಹಡಗಲಿ ಮಾರ್ಗದಲ್ಲಿ ಕೂಲಹಳ್ಳಿ ಕ್ರಾಸ್, ಬಂಡ್ರಿ, ಎರಡೆತ್ತಿನಹಳ್ಳಿ ಹಾಗೂ ಕಾನಹಳ್ಳಿಯಲ್ಲಿ ವಿದ್ಯಾರ್ಥಿಗಳಿಗಾಗಿ ಬಸ್ ನಿಲುಗಡೆ ಮಾಡಬೇಕು.
ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿಗಳು, ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಸಾರಿಗೆ ಸಂಸ್ಥೆಯು ಖುದ್ದಾಗಿ ಈ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು ಎಂದು ಒತ್ತಾಯಿಸಲಾಗಿದೆ. ಈ ಮನವಿ ಪತ್ರದ ಪ್ರತಿಗಳನ್ನು ಹರಪನಹಳ್ಳಿಯ ಹಿರಿಯ ಸಿವಿಲ್ ನ್ಯಾಯಾಧೀಶರಿಗೆ ಹಾಗೂ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕಿ ಎಂ. ಪಿ. ಲತಾ ಮಲ್ಲಿಕಾರ್ಜುನ್ ಅವರಿಗೆ ಮುಂದಿನ ಸೂಕ್ತ ಕ್ರಮಕ್ಕಾಗಿ ರವಾನಿಸಲಾಗಿದೆ. ಮುಖ್ಯ ಶಿಕ್ಷಕ ಎಚ್.ಕೆ.ಚಂದ್ರಪ್ಪ, ಶಾಲಾಭಿವೃದ್ದಿ ಮೇಲುಸ್ತುವಾರಿ
ಸಮಿತಿ ಪದಾಧಿಕಾರಿಗಳಿದ್ದರು.
Leave a comment