ದಾವಣಗೆರೆ : ಗಾಂಧಿನಗರದ ಶ್ರೀ ಮಲ್ನಾಡಿ ಚೌಡೇಶ್ವರಿ ದೇವಿ ದೇವಸ್ಥಾನ ಸಮಿತಿ ಹಾಗೂ ಶ್ರೀ ಯುವಕರ ಬಳಗದ ಆಶ್ರಯದಲ್ಲಿ 21ನೇ ವರ್ಷದ ಜಾತ್ರಾ ಮಹೋತ್ಸವವು ಮಂಗಳವಾರ ಶ್ರದ್ಧಾ-ಭಕ್ತಿಯಿಂದ ಜರುಗಿತು. ದೇವಿಗೆ ಬೆಳಿಗ್ಗೆಯಿಂದಲೇ ವಿಶೇಷ ಅಭಿಷೇಕ, ಅಲಂಕಾರ, ನೈವೇದ್ಯ ಹಾಗೂ ಮಹಾ ಮಂಗಳಾರತಿ ನೆರವೇರಿಸಲಾಯಿತು. ಭಕ್ತಾದಿಗಳು ಹರಕೆಗಳನ್ನು ಒಪ್ಪಿಸಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.
ಪೂರ್ವಜರ ಕಾಲದಿಂದ ನಡೆದುಕೊಂಡು ಬಂದ ಸಂಪ್ರದಾಯದಂತೆ, ಸಾರ್ವಜನಿಕರ ಸಂಕಷ್ಟಗಳನ್ನು ನಿವಾರಿಸುವಂತೆ ದೇವಿಯಲ್ಲಿ ಪ್ರಾರ್ಥಿಸುವುದು ಈ ಜಾತ್ರೆಯ ವಾಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸಮಿತಿಯ ಪದಾಧಿಕಾರಿಗಳು ಮಂಗಳವಾರದಿಂದ ಶುಕ್ರವಾರದವರೆಗೆ ಅತ್ಯಂತ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವವನ್ನು ಆಯೋಜಿಸಿದ್ದರು. ಬುಧವಾರ ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು. ನಂತರ ಶ್ರೀ ಮಲ್ನಾಡಿ ಚೌಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಪ್ರಮುಖ ಬೀದಿಗಳಲ್ಲಿಭವ್ಯ ಮೆರವಣಿಗೆಯ ಮೂಲಕ ಗರ್ಭಗುಡಿಗೆ ಮರಳಿ ತರಲಾಯಿತು.
ಜಾತ್ರೆಯ ಪ್ರಯುಕ್ತ ಶುಕ್ರವಾರ ಸಂಜೆ ರಸಮಂಜರಿ ಮನೋರಂಜನಾ ಕಾರ್ಯಕ್ರಮಗಳು ಜರುಗಲಿವೆ. ಪ್ರಧಾನ ಅರ್ಚಕರಾದ ರಾಘು ಹಾಗೂ ಸಮಿತಿಯ ಪದಾಧಿಕಾರಿಗಳಾದ ವಾಸುದೇವ್ ಮತ್ತು ಉಚ್ಚೆಂಗಪ್ಪ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿಕೊಟ್ಟರು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ವಾಸುದೇವ್, ಕಾರ್ಯದರ್ಶಿ ಹುಚ್ಚಂಗೆಪ್ಪ, ಉಪಾಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ನೀಲಗಿರಿಯಪ್ಪ, ಆರ್. ಶಶಿ, ವೆಂಕಿ, ಶ್ರೀನಿವಾಸ್, ರಾಕಿ ಮಂಜಪ್ಪ, ಅರವಿಂದ್, ರಾಜಪ್ಪ, ವಿಶ್ವ, ಗಂಗಪ್ಪ, ಪರಮೇಶಿ ಹಾಗೂ ಪ್ರಭು ಕುಮಾರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
Leave a comment