ಹರಪನಹಳ್ಳಿ : ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ‘ಅಂಬ್ಲಿ ದೊಡ್ಡ ಭರಮಪ್ಪ ಪ್ರಥಮ ದರ್ಜೆ ಕಾಲೇಜಿ’ನ ಸುವರ್ಣ ಮಹೋತ್ಸವ ಹಾಗೂ ‘ಷಾ. ಶೇಷಾಜಿ ಹಸ್ತಿಮಲ್ ಜೈನ್ ಪದವಿ ಪೂರ್ವ ಕಾಲೇಜಿ’ನ ರಜತ ಮಹೋತ್ಸವದ ಅಂಗವಾಗಿ ಜರುಗಿದ ‘ಸುರ ಸಂಭ್ರಮ‘ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು ಶಿಕ್ಷಣ ಸಂಸ್ಥೆಗಳ ಮೂಲಕ ಯಾವುದೇ ಜಾತಿ, ಧರ್ಮ ಮತ್ತು ಲಿಂಗ ತಾರತಮ್ಯ ಮಾಡದೇ ಎಲ್ಲರಿಗೂ ಸಮಾನ ಶಿಕ್ಷಣ ನೀಡಿ ಸಮಾಜದ .ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಮಹತ್ತರ ಕೀರ್ತಿ ವೀರಶೈವ ಮಠ-ಮಾನ್ಯಗಳಿಗೆ ಸಲ್ಲುತ್ತದೆ ಎಂದು ಉಜ್ಜಯಿನಿ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ, “ನಮ್ಮ ತಾಲ್ಲೂಕಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿರಲಿಲ್ಲ. ಆಗಿನ ಕಾಲದಲ್ಲಿ ಗುರು-ಹಿರಿಯರು ಹಾಗೂ ದಾನಿಗಳು 50 ಸಾವಿರ ರೂಪಾಯಿಗಳಷ್ಟು ದೊಡ್ಡ ಮೊತ್ತದ ದೇಣಿಗೆ ನೀಡಿ ಒಗ್ಗಟ್ಟಿನಿಂದ ಈ ಕಾಲೇಜುಗಳನ್ನು ಕಟ್ಟಿದರು. ಅವರ ಆ ತ್ಯಾಗವೇ ಇಂದಿನ ಬೆಳೆವಣಿಗೆಗೆ ಕಾರಣ. ನಾವೆಲ್ಲರೂ ಓದಿದ ಸಂಸ್ಥೆ ಎಂದು ಹೇಳಿಕೊಳ್ಳಲು ನಮಗೆ ಅತ್ಯಂತ ಹೆಮ್ಮೆ ಎನಿಸುತ್ತದೆ” ಎಂದು ಹಳೆಯ ನೆನಪುಗಳನ್ನು ಮೆಲಕುಹಾಕಿದರು.
ಮಾನವನ ಬದುಕಿಗೆ ಹಸಿವು ನೀಗಿಸುವ ಅನ್ನ ಹಾಗೂ ಧರ್ಮ-ಅಧರ್ಮಗಳನ್ನು ವಿವೇಚಿಸುವ ವಿದ್ಯೆ ಅತ್ಯಗತ್ಯ. ಹಣ ಮತ್ತು ಅಧಿಕಾರ ಶಾಶ್ವತವಲ್ಲ; ಆದರೆ ನಾವು ಗಳಿಸಿದ ಶಿಕ್ಷಣ ಕೊನೆಯುಸಿರಿನವರೆಗೂ ನಮ್ಮನ್ನು ಕಾಪಾಡುತ್ತದೆ. ವಿದ್ಯಾರ್ಥಿಗಳು ತಂದೆ-ತಾಯಿ ಹಾಗೂ ಪರಂಪರೆಗೆ ಕೆಟ್ಟ ಹೆಸರು ತರದೆ, ಸಮಾಜಕ್ಕೆ ಉಪಕಾರಿಯಾಗುವಂತೆ ಬಾಳಬೇಕು. ರಾಜ್ಯದ ಮೂಲೆ ಮೂಲೆಗಳಲ್ಲಿ ಹೆಮ್ಮರಗಳಂತೆ ಬೆಳೆದಿರುವ ಸಂಸ್ಥೆಗಳು ಲಕ್ಷಾಂತರ ಜನರಿಗೆ ಜವಾಬ್ದಾರಿಯುತ ಬದುಕನ್ನು ಕಟ್ಟಿಕೊಟ್ಟಿವೆ” ಎಂದು ಉಜ್ಜಿಯಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ತೆಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, “ಅನ್ನ, ನೀರು, ಅಕ್ಷರ ಮತ್ತು ಸುಭಾಷಿತಗಳು ವ್ಯಕ್ತಿಯ ಬದುಕಿಗೆ ಪ್ರಮುಖ ಆಧಾರ. ವಿದ್ಯಾರ್ಥಿಗಳು ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. 80ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ವೀರಶೈವ ವಿದ್ಯಾವರ್ಧಕ ಸಂಘವು ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದೆ. ‘ಸುರ ಸಂಭ್ರಮ’ದ ಮೂಲಕ ಇಡೀ ದೇವಲೋಕವನ್ನೇ ಕಣ್ಣಮುಂದೆ ಚಿತ್ರಿಸಿದ್ದಾರೆ. ಇಲ್ಲಿ ಪಠ್ಯ ಮುಗಿಸಿದ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದು, ಸಂಸ್ಥೆಯು ರತ್ನಗಳನ್ನು ಸಮಾಜಕ್ಕೆ ನೀಡಿದೆ” ಎಂದರು.
ಕಾರ್ಯಕ್ರಮದಲ್ಲಿ ವಿ.ವಿ. ಸಂಘದ ಕಾರ್ಯದರ್ಶಿ ಅರವಿಂದ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ವಿ. ಸಂಘದ ಅಧ್ಯಕ್ಷ ಡಾ. ಕುಣಿಗಲ್ ಮಹಾಂತೇಶ್ ಅಧ್ಯಕ್ಷತೆ ವಹಿಸಿದ್ದರು. ಈ ಶುಭ ಸಮಾರಂಭದಲ್ಲಿ ವಿ.ವಿ. ಸಂಘದ ಉಪಾಧ್ಯಕ್ಷರು, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ. ಕೊಟ್ರೇಶ್ವರ, ಗಣಪತ್ ರಾಜ್ ಜೈನ್, ದಾನಿಗಳ ಕುಟುಂಬದ ಅಂಬ್ಲಿ ಮಂಜುನಾಥ, ಕೆ. ರುದ್ರಪ್ಪ, ಕೆ. ಆನಂದ, ಜಾನಕುಂಟೆ ಬಸವರಾಜ್, ಆಡಳಿತ ಮಂಡಳಿ ಸದಸ್ಯರಾದ ಅಕ್ಕಿ ಶಿವಕುಮಾರ್, ಕೋರಿ ವಿರೂಪಾಕ್ಷಪ್ಪ, ಸಿ. ಮೋಹನ ರೆಡ್ಡಿ, ಎಲ್.ಟಿ. ಶೇಖರ್, ಕಾತ್ಯಾಯಿನಿ, ಚೋರನೂರು ಕೊಟ್ರಪ್ಪ, ಪಟೇಲ್ ಬೆಟ್ಟನಗೌಡ, ಪ್ರಾಚಾರ್ಯರಾದ ಸಿದ್ದಲಿಂಗಮೂರ್ತಿ, ಎ.ಎಂ. ಶರತ್ ಹಾಗೂ ವಿವಿಧ ಗಣ್ಯರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Leave a comment