ಹರಪನಹಳ್ಳಿ : ರಾಜ್ಯ ಖಜಾನೆಗೆ ಕನ್ನ ಹಾಕಲು ಬಂದಿದ್ದ ಕಳ್ಳ ಸೈನಿಕರ ಕೈಗೆ ಸಿಕ್ಕಿ ಬಿದ್ದ, ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ರಾಜನಿಗೆ ತನ್ನ ಆಸ್ಥಾನದಲ್ಲಿರುವ ಪ್ರತಿಯೊಬ್ಬರು ಕಳ್ಳರೇ ಎಂಬುದನ್ನು ತೋರಿಸಿದ ಕಳ್ಳರ ಸಂತೆ ನಾಟಕವು ಸಾಮಾಜಿಕ ವ್ಯವಸ್ಥೆಯ ಕೈಗನ್ನಡಿ ಪ್ರದರ್ಶಿಸಿತು.
ಹಳೇ ಬಸ್ ನಿಲ್ದಾಣದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಎಂ.ಪಿ.ರವೀಂದ್ರ ಪ್ರತಿಷ್ಠಾನ ಕಾರ್ತಿಕಮಾಸ ನಾಟಕೋತ್ಸವದಲ್ಲಿ ಆಯೋಜಿಸಿದ್ದ ಸಾಣೆಹಳ್ಳಿ ಶಿವಸಂಚಾರ ತಂಡ ‘ಕಳ್ಳರ ಸಂತೆ’ ನಾಟಕ ಅಭಿನಯಿಸಿತು. 15ನೇ ಶತಮಾನದ ಕವಿ ವಿದ್ಯಾಪತಿ ರಚಿಸಿದ ಕಥೆಯಿಂದ ಪ್ರೇರಿತವಾಗಿ ಕೃಷ್ಣಮೂರ್ತಿ ಎನ್.ತಾಳಿಕಟ್ಟೆ ಅವರು ರಚಿಸಿದ ನಾಟಕವನ್ನು ಸಾಣೆಹಳ್ಳಿ ಶಿವಂಚಾರ ತಂಡದ ಕಲಾವಿದರು ಪ್ರದರ್ಶಿಸಿ ಗಮನ ಸೆಳೆದರು.
ರಾಜ್ಯದಲ್ಲಿ ಬರಗಾಲ ಇರುವ ಕಾರಣ, ಹಸಿವು ತಾಳಲಾರದೇ ಕಳ್ಳತನಕ್ಕೆ ಬಂದಿದ್ದ ದೊಡ್ಡಕಳ್ಳ ಕಾವಲುಗಾರರ ಕೈಗೆ ಸಿಕ್ಕಿ ಬೀಳುತ್ತಾನೆ. ನಿನ್ನಂತ ಕಳ್ಳ ಬದುಕಿರಬಾರು ಎಂದು ಕಳ್ಳನಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸಿಸಲು ರಾಜಯ ಆದೇಶಿಸುತ್ತಾನೆ. ಆದರೆ ಕಳ್ಳ ಚಾಣಾಕ್ಷತನದಿಂದ ಪ್ರಾಣ ಉಳಿಸಿಕೊಳ್ಳುವ ಸಲುವಾಗ ರಾಜನ ಸುತ್ತಮುತ್ತ ಇರುವವರೆಲ್ಲರು ಕಳ್ಳರು, ಸುಳ್ಳರು, ಮೋಸಗಾರರು ಎಂಬುದನ್ನು ಬಟಾಬಯಲು ಮಾಡುವುದು ರಂಗಾಸಕ್ತರಿಗೆ ಮನದಟ್ಟು ಮಾಡಿಕೊಡುತ್ತದೆ.
ರಾಜನ ಪಾತ್ರದಲ್ಲಿ ಸುನೀಲ ಪಾಟೀಲ್, ಮಂತ್ರಿ, ರಾಜಕಾರಣಿಗಳಾಗಿ ವಿಶ್ವಾಸರೆಡ್ಡಿ, ಜೆ.ಜನಾರ್ಧನ, ದಿನೇಶ್, ಪೊಲೀಸ್ ಆಗಿ ಜಿ.ಯಲ್ಲಪ್ಪ, ದೊಡ್ಡಕಳ್ಳನ ಪಾತ್ರಧಾರಿ ಬಸವರಾಜ ತಮ್ಮಣ್ಣ, ಸಣ್ಣಕಳ್ಳನಾಗಿ ಪ್ರಶಾಚಿತ, ಸೈನಿಕರಾಗಿ ರಾಜೇಶ್, ಸ್ವಾಮಿಯಾಗಿ ಸುಹಾಸ್, ನ್ಯಾಯಧೀಶರಾಗಿ ಸುಹಾಸ್, ಉದಯ, ಪತ್ರಕರ್ತೆಯಾಗಿ ವಿಶ್ವಜ್ಯೋತಿ, ನಾಗರತ್ನಾ ಹಿರೇಮಠ ಅವರ ಭಾವಾಭಿನಯ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿತ್ತು. ಅಷ್ಟೇ ಅಲ್ಲದೇ ಪ್ರಸ್ತುತ ಸಮಾಜದ ವಾಸ್ತವ ಚಿತ್ರಣವನ್ನು ಕಟ್ಟಿಕೊಟ್ಟರು. ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ, ಮುಖಂಡ ಎಚ್.ಎಂ.ಮಲ್ಲಿಕಾರ್ಜುನ್, ಇಸ್ಮಾಯಿಲ್ ಎಲಿಗಾರ, ಕಣಿವಿಹಳ್ಳಿ ಮಂಜುನಾಥ, ಮೈದೂರು ಒ.ರಾಮಪ್ಪ, ಮೈದೂರು ರಾಮಪ್ಪ ಮತ್ತಿಹಳ್ಳಿ, ಸಾಸ್ವಿಹಳ್ಳಿ ನಾಗರಾಜ್, ಮತ್ತೂರು ಬಸವರಾಜ್, ಉದಯಶಂಖರ, ನಾಗಾರ್ಜುನ, ಮಲ್ಲಿಕಾರ್ಜುನ ಸೇರಿದಂತೆ ಅನೇಕರಿದ್ದರು.
Leave a comment