ಹರಪನಹಳ್ಳಿ: ಪ್ರತಿ ಹೋಬಳಿಗೊಂದು ಮೆಕ್ಕೆಜೋಳ ಮತ್ತು ಭತ್ತದ ಬೆಳೆಗೆ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ಒತ್ತಾಯಿಸಿ ಭಾರತೀಯ ಜನತಾ ಪಾರ್ಟಿ ಪದಾಧಿಕಾರಿಗಳು ಸೋಮವಾರ (ಬಿಜೆಪಿ ಪ್ರತಿಭಟನೆ) ಪ್ರತಿಭಟನೆ ನಡೆಸಿದರು.
ನಗರದ ಹಿರೆಕೆರೆ ವೃತ್ತದಲ್ಲಿ ಅಲಂಕೃತ ಎತ್ತಿನಬಂಡಿ ಸಮೇತ ಆರಂಭವಾದ ಪ್ರತಿಭಟನಾ ಮೆರವಣಿಗೆ ಉದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಮುಖ ರಸ್ತೆಯ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ತಲುಪಿ, ಬಹಿರಂಗ ಸಭೆಯ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
Read Also: ಬಳ್ಳಾರಿಯಲ್ಲಿ ಮಾ.23ಕ್ಕೆ ಪಂಚಾಚಾರ್ಯ ಯುಗಮಾನೋತ್ಸವ
ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ರೈತರ ಪರವಾಗಿದೆ, ಆದರೆ ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ₹ 2400 ಬೆಂಬಲ ಬೆಲೆ ಕೊಟ್ಟಿದೆ. ಇದಕ್ಕೆ ₹ 600 ಸೇರಿಸಿ ರಾಜ್ಯ ಸರ್ಕಾರ ಕೊಡಬೇಕು ಮತ್ತು ಭತ್ತಕ್ಕೆ ₹ 3000 ಬೆಂಬಲ ಬೆಲೆ ಘೋಷಿಸಬೇಕು. ಈರುಳ್ಳಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ರೆಡ್ಡಿ ಮಾತನಾಡಿ, ರೈತರಿಗಾಗಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವ ಬದಲು ಸಿಎಂ ಕುರ್ಚಿಗಾಗಿ ಶಾಸಕರ ಖರೀದಿಯತ್ತ ಮುಖ ಮಾಡಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಆರೇಳು ತಿಂಗಳ ಹಿಂದೆಯೇ ಮೆಕ್ಕೆಜೋಳಕ್ಕೆ ₹ 2400 ಬೆಲೆ ಘೋಷಿಸಿದೆ. ಆದರೆ ಅದನ್ನು ಅನುಷ್ಠಾನಕ್ಕೆ ತರುವಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ. ಬೀದರ, ಕಲುಬುರಗಿ ಜಿಲ್ಲೆಯಲ್ಲಿ ತೊಗರಿ ಬೆಳೆ ಹಾನಿಯಾಗಿದೆ. ಹಾಲಿನ ಪ್ರೋತ್ಸಾಹ ಧನ ನೀಡದ ರಾಜ್ಯ ಸರ್ಕಾರ ರೈತರನ್ನು ಸಂಕಷ್ಟಕ್ಕೆ ತೊಂದರೆಗೆ ಸಿಲುಕಿಸಿದೆ. ಮಂಗಳವಾರ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು.
ಹೊಸ ಟ್ರಾನ್ಸ್ ಫಾರ್ಮರ್ ಮತ್ತು ಸರ್ವಿಸ್ಗೆ ಲಕ್ಷಗಟ್ಟಲೆ ಹಣ ವಸೂಲಿ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಯಡಿಹಳ್ಳಿ ಶೇಖರಪ್ಪ, ಮುಖಂಡರಾದ ಬಾಗಳಿ ಕೊಟ್ರೇಶಪ್ಪ, ಆರುಂಡಿ ನಾಗರಾಜ್, ಆರ್.ಲೋಕೇಶ್, ಎನ್.ಜಿ.ಸಿದ್ದೇಶ, ಪಂಪಾ ನಾಯ್ಕ, ಎಂ.ಮಲ್ಲೇಶ್, ಪ್ರಕಾಶ್, ಪೂರ್ಯನಾಯ್ಕ, ಮತ್ತಿಹಳ್ಳಿ ಕೆಂಚಪ್ಪ, ಬಸವನಗೌಡ, ಕಿರಣ್, ಜಾವಿದ್, ಮಾರುತಿ, ಮಹೇಶ ಪೂಜಾರ, ಬಸವರಾಜ್, ಪ್ರಕಾಶ್, ಮಹಾಂತೇಶ, ಶೃಂಗಾರತೋಟ ನಿಂಗರಾಜ್, ಅಜ್ಜಯ್ಯ ಭಾಗವಹಿಸಿದ್ದರು.
Leave a comment