ದಾವಣಗೆರೆ: “‘ಧರ್ಮೋ ರಕ್ಷತಿ ರಕ್ಷಿತಃ’ ಎಂಬಂತೆ ‘ವೃಕ್ಷೋ ರಕ್ಷತಿ ರಕ್ಷಿತಃ’ ಎಂಬುದನ್ನು ಪ್ರತಿಯೊಬ್ಬರೂ ಅರಿತು ಪರಿಸರ ಉಳಿಸುವತ್ತ ಹೆಜ್ಜೆ ಹಾಕಬೇಕು” ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು ಹೇಳಿದರು.
ನಗರದ ಶ್ರೀ ಸೋಮೇಶ್ವರ ವಿದ್ಯಾಲಯದ ಆವರಣದಲ್ಲಿ ‘ಪ್ರಕೃತಿ ಸಂರಕ್ಷಣಾ ಸಂಸ್ಥೆ’ಯ ರಾಜ್ಯ ಘಟಕ ಉದ್ಘಾಟನೆ, ಜಿಲ್ಲಾ ವರದಿಗಾರರ ಕೂಟ ಹಾಗೂ ಭಾರತೀಯ ವಿಕಾಸ ಪರಿಷತ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಗೆ ಸಸಿ ನೆಡುವ ಮೂಲಕ ಅವರು ಚಾಲನೆ ನೀಡಿದರು.
ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಮತ್ತು ಆರೋಗ್ಯಯುತ ಪರಿಸರವನ್ನು ಬಿಟ್ಟು ಹೋಗುವ ದೊಡ್ಡ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಮನೆ ಮುಂದೆ ಕನಿಷ್ಠ ಒಂದು ತುಳಸಿ ಗಿಡವನ್ನಾದರೂ ಬೆಳೆಸುವುದು ನಮ್ಮ ಸಂಸ್ಕೃತಿಯ ಭಾಗವಾಗಬೇಕು ಎಂದರು.
ಪ್ರಕೃತಿ ಸಂರಕ್ಷಣಾ ಸಂಸ್ಥೆಯ ಸಂಸ್ಥಾಪಕ ಕೆ.ಬಿ. ಕೊಟ್ರೇಶ ಮಾತನಾಡಿ, ಸಸಿ ನೆಡುವುದರ ಜೊತೆಗೆ ಕಸ ವಿಲೇವಾರಿ, ತ್ಯಾಜ್ಯ ನೀರು ಶುದ್ಧೀಕರಣ ಹಾಗೂ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ ಎಂದರು.
ಅಧ್ಯಕ್ಷತೆವಹಿಸಿದ್ದ ಸೋಮೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಂ. ಸುರೇಶ ಮಾತನಾಡಿ, ಗೋಣಿವಾಡದ ನಮ್ಮ ಶಾಲೆಯಲ್ಲಿ 2 ಸಾವಿರಕ್ಕೂ ಅಧಿಕ ಹಣ್ಣಿನ ಗಿಡಗಳನ್ನು ಬೆಳೆಸಲಾಗಿದ್ದು, ಅವು ವಿದ್ಯಾರ್ಥಿಗಳು ಹಾಗೂ ಪ್ರಾಣಿ-ಪಕ್ಷಿಗಳಿಗೆ ಆಸರೆಯಾಗಿವೆ ಎಂದು ಹರ್ಷ ವ್ಯಕ್ತಪಡಿಸಿದರು. ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್. ಬಡದಾಳ್, ಭಾರತೀಯ ವಿಕಾಸ ಪರಿಷತ್ ಅಧ್ಯಕ್ಷ ಪ್ರಸಾದ ಬಂಗೇರ, ಪ್ರಮುಖರಾದ ಎಸ್.ಟಿ. ಕುಸುಮಶ್ರೇಷ್ಟಿ ಹಾಗೂ ಶಾಲೆಯ ಪ್ರಾಚಾರ್ಯೆ ಪ್ರಭಾವತಿ ಸೇರಿದಂತೆ ಹಲವು ಗಣ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Leave a comment