ಹರಪನಹಳ್ಳಿ: ತಾಲ್ಲೂಕಿನಲ್ಲಿ ಶನಿವಾರ ಸಂಜೆ ದಿಢೀರ್ ಅಪ್ಪಳಿಸಿದ ರಭಸದ ಬಿರುಗಾಳಿ ಮತ್ತು ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬಿರುಗಾಳಿಯ ಹೊಡೆತಕ್ಕೆ 50ಕ್ಕೂ ಹೆಚ್ಚು ಮನೆಗಳು ಜಖಂಗೊಂಡಿದ್ದು, ನೂರಾರು ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿ ಹತ್ತಾರು ಹಳ್ಳಿಗಳು ಕತ್ತಲಲ್ಲಿ ಮುಳುಗಿವೆ.
ಬೆಂಡಿಗೇರೆ ಸಣ್ಣ ತಾಂಡಾ: ಇಲ್ಲಿ ಗಾಳಿ-ಮಳೆಯ ಆರ್ಭಟಕ್ಕೆ 25ಕ್ಕೂ ಹೆಚ್ಚು ಮನೆಗಳಿಗೆ ತೀವ್ರ ಹಾನಿಯಾಗಿದೆ. ಮನೆಯೊಂದರ ಮೇಲೆ ಬೃಹತ್ ಜಾಲಿಮರ ಉರುಳಿಬಿದ್ದಿದ್ದು, ಮನೆ ಮಂದಿಯೆಲ್ಲಾ ತಕ್ಷಣ ಹೊರಗೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗುಂಡಗತ್ತಿ ಮತ್ತು ಶೃಂಗಾರತೋಟ: ರಸ್ತೆಗೆ ಬೃಹತ್ ಬೇವಿನ ಮರ ಉರುಳಿ ವಾಹನ ಸಂಚಾರ ಬಂದ್ ಆಗಿತ್ತು. ಹಲವು ಮನೆಗಳ ಮೇಲ್ಛಾವಣಿಯ ಶೀಟ್ಗಳು ಗಾಳಿಯ ರಭಸಕ್ಕೆ ಹಾರಿಹೋಗಿವೆ. ಮಳೆ ಶುರುವಾಗುತ್ತಿದ್ದಂತೆ ಬೆಸ್ಕಾಂ ಸಿಬ್ಬಂದಿ ಪವರ್ ಕಟ್ ಮಾಡಿದ್ದರಿಂದ ದೊಡ್ಡ ಮಟ್ಟದ ವಿದ್ಯುತ್ ಅವಘಡ ತಪ್ಪಿದೆ.
ಕಂಚಿಕೆರೆ ರಸ್ತೆ: ರಸ್ತೆಗೆ ಮರ ಬಿದ್ದು ಪ್ರಯಾಣಿಕರು ಪರದಾಡುತ್ತಿದ್ದಾಗ, ಪೊಲೀಸರೇ ಖುದ್ದಾಗಿ ನಿಂತು ಸಾರ್ವಜನಿಕರ ಸಹಾಯದೊಂದಿಗೆ ಮರದ ಕೊಂಬೆಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು. ಬಾಗಳಿ, ಹಳ್ಳಿಕೇರಿ, ಸತ್ತೂರು, ಚೌಡಾಪುರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲೂ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಗ್ರಾಮಸ್ಥರು ರಾತ್ರಿಯಿಡೀ ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ.
Leave a comment