ಹರಪನಹಳ್ಳಿ: ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಆರೋಗ್ಯವಂತ ರಾಷ್ಟ್ರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಕರೆ ನೀಡಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳ ಆರೋಗ್ಯವೇ ದೇಶದ ಭಾಗ್ಯ. ಮಕ್ಕಳನ್ನು ಅಂಗವೈಕಲ್ಯದಿಂದ ಪಾರು ಮಾಡಲು ಪೋಷಕರು ತಪ್ಪದೇ ಲಸಿಕೆ ಹಾಕಿಸಬೇಕು ಎಂದರು.
ಆಸ್ಪತ್ರೆ ಆರೋಗ್ಯ ಅಧಿಕಾರಿ ಡಾ. ದತ್ತಾತ್ತೇಯ ಪಿಸೆ ಮಾತನಾಡಿ, ಪೋಲಿಯೋ ವೈರಾಣು ಹರಡುವಿಕೆ ತಡೆಗೆ ಮುಂಜಾಗ್ರತೆಯಾಗಿ ಈ ಅಭಿಯಾನ ನಡೆಸಲಾಗುತ್ತಿದೆ ಎಂದು ತಿಳಿಸಿದರು. ತಾಲ್ಲೂಕು ವೈದ್ಯಾಧಿಕಾರಿ ಡಾ. ಅರವಿಂದ್ ಮಾಹಿತಿ ನೀಡಿ, ತಾಲೂಕಿನಲ್ಲಿ 5 ವರ್ಷದೊಳಗಿನ ಒಟ್ಟು 26,266 ಮಕ್ಕಳಿದ್ದು (ನಗರ 4,560, ಗ್ರಾಮೀಣ 21,706), ಅವರಿಗಾಗಿ 182 ಬೂತ್ಗಳು ಹಾಗೂ 4 ಸಂಚಾರಿ ತಂಡಗಳನ್ನು ರಚಿಸಲಾಗಿದೆ. 372 ಸಿಬ್ಬಂದಿ ಲಸಿಕೆ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ.
ಬೂತ್ ದಿನದಂದು ಲಸಿಕೆ ಪಡೆಯದ ಮಕ್ಕಳಿಗೆ, ಮುಂದಿನ ಮೂರು ದಿನ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಾಗುವುದು ಎಂದರು. ಡಾ. ವಂದನಾ, ಡಾ. ಮಂಗಳಾ, ರುದ್ರಚಾರಿ, ಎಚ್. ಗೌರಮ್ಮ, ಭುವನೇಶ್ವರಿ, ಚಂದ್ರಪ್ಪ, ಪವಿತ್ರಾ, ಆನಂದ್, ಕರಿಬಸವರಾಜ, ವಿರುಪಾಕ್ಷಿ, ಪರ್ಜನಾ, ಮಂಜುಳಾ, ಇಂದಿರಮ್ಮ, ರೇಣುಕಮ್ಮ, ಗಣೇಶ್ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
Leave a comment