ಕಲಬುರಗಿ: ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಕಡಗಂಚಿ, ಕಲಬುರಗಿ ಧರ್ಮಕ್ಷೇತ್ರದ ದುಡಿಮೆಗಾರರ ಆಯೋಗ, ಅನುಗ್ರಹ ಕಣ್ಣಿನ ಆಸ್ಪತ್ರೆ–ಭೋರುಕಾ ನೇತ್ರಾಲಯ, ಡಿವೈನ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಕಲಬುರಗಿ ಹಾಗೂ ಸ್ತ್ರೀವಾಣಿ ಇವರ ಸಹಯೋಗದಲ್ಲಿ ಕಲಬುರಗಿಯ ಮದರ್ ತೆರೇಸಾ ಹಾಲ್‌ನಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಕ್ಯಾಥೆಡ್ರಲ್ ಚರ್ಚ್‌ನ ಧರ್ಮಗುರು ಫಾ. ಪ್ರವೀಣ್ ಅವರು ವೈದ್ಯರು ಹಾಗೂ ಶಿಬಿರದ ಆಯೋಜಕರೊಂದಿಗೆ ಶಿಬಿರವನ್ನು ಉದ್ಘಾಟಿಸಿದರು. ಶಿಬಿರದಲ್ಲಿ ಒಟ್ಟು 261 ಜನರು ಆರೋಗ್ಯ ತಪಾಸಣೆಯ ಸೌಲಭ್ಯ ಪಡೆದರು. ಅಗತ್ಯವಿರುವವರಿಗೆ ಉಚಿತ ಔಷಧಿಗಳನ್ನು ವಿತರಿಸಲಾಯಿತು. ಕಣ್ಣಿನ ತಪಾಸಣೆಯ ಸಂದರ್ಭದಲ್ಲಿ 17 ಜನರಿಗೆ ಕಣ್ಣಿನ ಪೊರೆ (ಕ್ಯಾಟರಾಕ್ಟ್) ಇರುವುದು ಪತ್ತೆಯಾಗಿದ್ದು, ಉಚಿತ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.
ಶಿಬಿರದಲ್ಲಿ ಫಾ. ವಿಲಿಯಂ ಮಿರಾಂಡಾ, ಫಾ. ಪ್ರವೀಣ್, ಸಿಸ್ಟರ್ ಆನ್, ಸಿಸ್ಟರ್ ಸಿಂಥಿಯಾ, ಡಾ. ಡೆನ್ಜಿಲ್, ಡಾ. ಅಂಬಿಕಾ, ಡಾ. ದೀಪಾ, ಡಾ. ಪ್ರೀತಿ, ಡಾ. ಪ್ರವೀಣ್ ಹಾಗೂ ಡಿವೈನ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞರಾದ ಶ್ರೀ ಕುಮಾರ್, ಶ್ರೀ ದತ್ತಾ ಹಾಗೂ ಅವರ ತಂಡ ಮತ್ತು ಸ್ತ್ರೀವಾಣಿಯ ಸಿಬ್ಬಂದಿ ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಬಡ ಹಾಗೂ ಅಗತ್ಯವಿರುವ ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಆಯೋಜಿಸಲಾದ ಈ ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯಿತು.
Leave a comment