ಕೂಲಹಳ್ಳಿ (ಹರಪನಹಳ್ಳಿ) : ವಿಜಯನಗರ ಜಿಲ್ಲೆಯ ಪಂಚಗಣಾಧೀಶ್ವರರ ಬೀಡು ಎಂದೇ ಖ್ಯಾತಿ ಪಡೆದಿರುವ ಹರಪನಹಳ್ಳಿ ತಾಲ್ಲೂಕಿನ ಕೂಲಹಳ್ಳಿ ಗ್ರಾಮದಲ್ಲಿ ಗೋಣಿ ಬಸವೇಶ್ವರ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಭಕ್ತಸಾಗರದ ನಡುವೆ ಜರುಗಿತು.
ಪಂಚಗಣಾಧೀಶ್ವರರ ಐತಿಹಾಸಿಕ ಹಿನ್ನೆಲೆ ಮತ್ತು ವಿಶೇಷತೆ
ಬಸವಾದಿ ಶರಣರ ನಂತರ 15-16ನೇ ಶತಮಾನದಲ್ಲಿ ಜನಿಸಿದ ಪಂಚಗಣಾಧೀಶ್ವರರು ತಮ್ಮ ಪವಾಡಗಳ ಮೂಲಕ ಲೋಕಕಲ್ಯಾಣಕ್ಕಾಗಿ ಶ್ರಮಿಸಿ, ಧಾರ್ಮಿಕ ಕುರುಹುಗಳನ್ನು ಬಿಟ್ಟುಹೋಗಿದ್ದಾರೆ ಎಂಬ ಬಲವಾದ ನಂಬಿಕೆ ಈ ಭಾಗದಲ್ಲಿದೆ. ವಿಜಯನಗರ ಜಿಲ್ಲೆಯ ಈ ಐವರು ಸಹೋದರರು ‘ಪಂಚಗಣಾಧೀಶ್ವರರು’ ಎಂದು ಪ್ರಸಿದ್ಧಿ ಪಡೆದಿದ್ದಾರೆ:
* ಕೊಟ್ಟೂರಿನ ಗುರುಬಸವೇಶ್ವರ
* ಹರಪನಹಳ್ಳಿಯ ಕೆಂಪೇಶ್ವರ
* ಅರಸೀಕೆರೆಯ ಕೋಲಶಾಂತೇಶ್ವರ
* ಕೂಲಹಳ್ಳಿಯ ಮದ್ದಾನೇಶ್ವರ
* ನಾಯಕನಹಟ್ಟಿಯ ತಿಪ್ಪೆರುದ್ರೇಶ್ವರ
ಅಣ್ಣನ ಮಾತು, ತಮ್ಮನ ಜಾತ್ರೆ: ಪ್ರತಿ ವರ್ಷ ಕೂಲಹಳ್ಳಿಯಲ್ಲಿ ಗೋಣಿ ಬಸವೇಶ್ವರ ಜಾತ್ರೆ ಆಚರಿಸಲಾಗುತ್ತದೆ. ರಥೋತ್ಸವದ ಸಂದರ್ಭದಲ್ಲಿ ಹಿರಿಯ ಸಹೋದರ ಕೊಟ್ಟೂರಿನ ಗುರುಬಸವೇಶ್ವರ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸುವುದು ಇಲ್ಲಿನ ವಿಶೇಷ. ಯಾವುದೇ ಕಷ್ಟದ ಸಂದರ್ಭದಲ್ಲೂ ಸ್ಮರಿಸುವಂತೆ ಮದ್ದಾನೇಶ್ವರರಿಗೆ ಹಿರಿಯ ಸಹೋದರ ಗುರುಬಸವೇಶ್ವರ ಮಾತುಕೊಟ್ಟಿದ್ದರು ಎನ್ನುವ ಪ್ರತೀತಿಯ ಸ್ಮರಣಾರ್ಥವಾಗಿ ಇಂದಿಗೂ ಈ ಸಂಪ್ರದಾಯ ಮುಂದುವರಿದುಕೊಂಡು ಬಂದಿದೆ.
ಸ್ವಾಮಿಧ್ವಜ ₹ 4.5 ಲಕ್ಷಕ್ಕೆ ಧ್ವಜ ಹರಾಜು
ದೇವಸ್ಥಾನದಲ್ಲಿ ಗೋಣಿ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕಗಳು ನೆರವೇರಿದವು. ಜಾತ್ರೆಯ ಹಿನ್ನೆಲೆಯಲ್ಲಿ ಮದ್ದಾನೇಶ್ವರ, ವಡ್ಡಟ್ಟೆಮ್ಮ ಹಾಗೂ ಕೊಟ್ಟೂರೇಶ್ವರ ದೇವಸ್ಥಾನ ಸೇರಿದಂತೆ ಗ್ರಾಮದ ಎಲ್ಲ ದೇವಾಲಯಗಳಿಗೂ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಗ್ರಾಮದ ಕೆರೆಯ ಅಂಗಳದಲ್ಲಿ ಕೆಂಪು-ಬಿಳಿ ಬಾವುಟಗಳು ಹಾಗೂ ಪಂಚಗಣಾಧೀಶ್ವರರ ಕಟೌಟ್‌ಗಳಿಂದ ರಥವನ್ನು ಶೃಂಗರಿಸಲಾಗಿತ್ತು. ಸಂಜೆ 4 ಗಂಟೆಗೆ ಮಠದ ಪಟ್ಟಾಧ್ಯಕ್ಷ ಚಿನ್ಮಯಿ ಸ್ವಾಮೀಜಿ, ಅರುಣಕುಮಾರ ಸ್ವಾಮಿ ಹಾಗೂ ಮನೆತನದ ಇತರ ಸ್ವಾಮೀಜಿಗಳ ನೇತೃತ್ವದಲ್ಲಿ ಮೆರವಣಿಗೆ ಪ್ರಾರಂಭವಾಯಿತು. ಪಟ್ಟದ ಕುದುರೆ, ನಂದಿಕೋಲು, ಡೊಳ್ಳು-ಬಾಜಾ, ಭಜಂತ್ರಿ, ಚಾಮರ, ಧ್ವಜ, ಪಂಜುಗಳು ಹಾಗೂ ಮಹಿಳೆಯರ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದರೆ, ಯುವಕರು ಕಲ್ಲಿನ ಗುಂಡುಗಳನ್ನು ಹೆಗಲ ಮೇಲೆ ಹೊತ್ತು ಸಾಹಸ ಪ್ರದರ್ಶಿಸಿ ಗಮನ ಸೆಳೆದರು.
ಗುರುಬಸವೇಶ್ವರ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ, ರಥಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ರಥಾರೋಹಣ ನೆರವೇರಿತು. ಈ ವೇಳೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸ್ವಾಮಿಯ ಧ್ವಜವನ್ನು ಭಕ್ತರಾದ ಅಜ್ಜಯ್ಯರ ನಾಗಪ್ಪ ಅವರು ಬರೋಬ್ಬರಿ ₹4,51,101ಕ್ಕೆ ತಮ್ಮದಾಗಿಸಿಕೊಂಡರು. ಭಕ್ತರು ರಥದ ಚಕ್ರಕ್ಕೆ ತೆಂಗಿನಕಾಯಿ, ಬಾಳೆಹಣ್ಣು ಅರ್ಪಿಸಿ, ಉತ್ತುತ್ತಿ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ಬಳಿಕ ರಥವು ಉತ್ತರಾಭಿಮುಖವಾಗಿ ಸಾಗಿತು.
ರಥಬೀದಿಯಲ್ಲಿ ವಿವಿಧ ಬಾವುಟ ಹಿಡಿದಿದ್ದ ಕೆಲ ಯುವಕರನ್ನು ಹಿಡಿದ ಪೊಲೀಸರು ಬಾವುಟಗಳನ್ನು ಜಪ್ತಿ ಮಾಡಿಕೊಂಡ ಘಟನೆಯೂ ಈ ವೇಳೆ ಸಂಭವಿಸಿತು. ಮತ್ತೊಂದೆಡೆ, ಭಕ್ತರು ಬೀದಿಯಲ್ಲೇ ಮಣ್ಣು ಮತ್ತು ಕಲ್ಲಿನಿಂದ ಮನೆ ಹಾಗೂ ತೊಟ್ಟಿಲು ಮಾದರಿಗಳನ್ನು ನಿರ್ಮಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಿದ್ದ ಭಕ್ತಿಭಾವದ ದೃಶ್ಯಗಳು ಎಲ್ಲರ ಗಮನಸೆಳೆದವು.
ಲಕ್ಷಾಂತರ ಜನ ಸೇರಿದ್ದರಿಂದ ರಥೋತ್ಸವದ ನಂತರ ವಾಹನ ದಟ್ಟಣೆ ಹೆಚ್ಚಾದರೂ, ಪೊಲೀಸರು ಸುಗಮ ಸಂಚಾರಕ್ಕೆ ಸೂಕ್ತ ಕ್ರಮ ಕೈಗೊಂಡರು. ಕಾರ್ಯಕ್ರಮದಲ್ಲಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ, ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಹಾಗೂ ಅರ್ಚಕರು ಉಪಸ್ಥಿತರಿದ್ದರು.
Leave a comment