ಹರಪನಹಳ್ಳಿ : ತಾಲ್ಲೂಕಿನ ಕುಂಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಚೂರು ಹಾಗೂ ಅರಸನಾಳು ಗ್ರಾಮಗಳ ನರೇಗಾ ಮತ್ತು ‘ವಿ.ಬಿ ಗ್ರಾಮ್ ಜಿ’ ಯೋಜನೆಯ ಕಾರ್ಮಿಕರು, ವಿಳಂಬವಾಗಿರುವ ಕೂಲಿ ಹಣವನ್ನು ತಕ್ಷಣವೇ ಪಾವತಿಸಬೇಕು ಹಾಗೂ ನಿವೇಶನ ರಹಿತರಿಗೆ ಸರ್ಕಾರಿ ಜಮೀನು ಕಾಯ್ದಿರಿಸಿ ನಿವೇಶನ ಒದಗಿಸಬೇಕು ಎಂದು ಆಗ್ರಹಿಸಿ ಹಕ್ಕೋತ್ತಾಯ ಮಂಡಿಸಿದರು.
ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಕಾರ್ಮಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೇವಲ 15 ದಿನಗಳಲ್ಲಿ ಕೂಲಿ ಪಾವತಿಸುವ ಹಾಗೂ ವಲಸೆ ತಪ್ಪಿಸಲು ನಿರಂತರ 125 ದಿನಗಳ ಕೆಲಸ ನೀಡುವ ಸರ್ಕಾರದ ಭರವಸೆಗಳು ಸಂಪೂರ್ಣ ಹುಸಿಯಾಗಿವೆ ಎಂದು ಅಸಮಾಧಾನ ಹೊರಹಾಕಿದರು.
ಕುಂಚೂರು ಗ್ರಾಮದ ಕಾರ್ಮಿಕರು 5 ವಾರಗಳಿಂದ ಕೆಲಸ ಮಾಡಿದರೂ ಕೂಲಿ ಬಂದಿಲ್ಲ. ಅರಸನಾಳು ಗ್ರಾಮದ ಕಾರ್ಮಿಕರ 8 ದಿನಗಳ ಹಳೆಯ ನರೇಗಾ ಬಾಕಿ ಹಣವನ್ನು ಕೇಂದ್ರ ಸರ್ಕಾರ ಇನ್ನೂ ಉಳಿಸಿಕೊಂಡಿದೆ, ಜೊತೆಗೆ ಇತ್ತೀಚಿನ 2 ವಾರದ ಕೂಲಿಯೂ ಪಾವತಿಯಾಗಿಲ್ಲ. ಬಾಕಿ ಕೂಲಿ ನೀಡದೆ, ಹೊಸ ಕಾನೂನುಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರದ ನಡೆ ಖಂಡನೀಯ. ಸರ್ಕಾರ ಕೂಡಲೇ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕರ ಪ್ರಮುಖ ಬೇಡಿಕೆಗಳು:
ಎಂ.ಜಿ.ಎನ್.ಆರ್.ಇ.ಜಿ.ಎ (MGNREGA) ಹಾಗೂ ‘ವಿ.ಬಿ ಗ್ರಾಮ್ ಜಿ’ ಅಡಿಯಲ್ಲಿ ಕೆಲಸ ಮಾಡಿದ ಕಾರ್ಮಿಕರ ಬಾಕಿ ಕೂಲಿಯನ್ನು ಕೂಡಲೇ ಪಾವತಿ ಮಾಡಬೇಕು.
ಕೆಲಸ ಕೇಳುವ ಎಲ್ಲಾ ಗುಂಪುಗಳಿಗೂ ನಿರಂತರವಾಗಿ 125 ದಿನಗಳ ಕಾಲ ಕೆಲಸ ಒದಗಿಸಬೇಕು.
100 ದಿನ ಪೂರೈಸಿದ ಕುಟುಂಬಗಳಿಗೆ ಉಳಿದ 25 ದಿನಗಳ ಕೆಲಸ ನೀಡಲು ‘ಎನ್‌ಎಂಆರ್’ (NMR) ಸೃಜನೆಯಾಗುತ್ತಿಲ್ಲ. ಈ ತಾಂತ್ರಿಕ ದೋಷವನ್ನು ಕೂಡಲೇ ಸರಿಪಡಿಸಬೇಕು.
ಕೆಲಸದ ಸ್ಥಳದಲ್ಲಿ ಮೃತಪಡುವ ಕಾರ್ಮಿಕರ ಕುಟುಂಬಕ್ಕೆ ನೀಡುವ ಪರಿಹಾರದ ಮೊತ್ತವನ್ನು ₹2 ಲಕ್ಷದಿಂದ ₹10 ಲಕ್ಷಕ್ಕೆ ಹೆಚ್ಚಿಸಿ ಆದೇಶ ಹೊರಡಿಸಬೇಕು.
ಎನ್‌ಎಂಎಂಎಸ್ (NMMS) ಆ್ಯಪ್ ದೋಷವನ್ನು ಸರಿಪಡಿಸಬೇಕು. ಆನ್‌ಲೈನ್ ಹಾಜರಾತಿ ಸಾಧ್ಯವಾಗದ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.
ಪ್ರಸ್ತುತ ಬರಗಾಲವಿದ್ದು, ಗಟ್ಟಿ ಮಣ್ಣು ಇರುವುದರಿಂದ ಕೆಲಸದ ಅಳತೆಯನ್ನು (ಟಾರ್ಗೆಟ್) ಕಡಿಮೆ ಮಾಡಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕು.
ವಸತಿ ಮತ್ತು ನಿವೇಶನ ರಹಿತ ಬಡವರನ್ನು ಗುರುತಿಸಿ, ಕೂಡಲೇ ಸರ್ಕಾರಿ ಜಮೀನಿನಲ್ಲಿ ನಿವೇಶನ ಕಾಯ್ದಿರಿಸಿ ಹಂಚಿಕೆ ಮಾಡಬೇಕು.
ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಂಚಾಲಕರಾದ ಅಕ್ಕಮಹಾದೇವಿ ಮರಬ್ಬಿಹಾಳು ಮತ್ತು ದುರುಗಮ್ಮ ಅವರ ನೇತೃತ್ವದಲ್ಲಿ ನಡೆದ ಈ ಹಕ್ಕೋತ್ತಾಯ ಮಂಡನೆಯಲ್ಲಿ ಅರಸನಾಳು ಗ್ರಾಮದ ಕಾರ್ಮಿಕರಾದ ಮಂಜುಳಾ, ನಿರ್ಮಲ, ಶಾಂತವ್ವ, ರತ್ನಮ್ಮ, ಮಾರುತಿ, ಶಿವಾನಂದಪ್ಪ, ಸೋಮಪ್ಪ, ಬಸವರಾಜ, ಕುಮಾರ, ಎಲ್ಲಪ್ಪ ಹಾಗೂ ಕುಂಚೂರು ಗ್ರಾಮದ ಕಾರ್ಮಿಕರಾದ ಮಂಜಮ್ಮ, ಅಕ್ಕಮ್ಮ, ಗಂಗಮ್ಮ, ಮಾರುತಿ, ದಾದಾಪೀರ್, ರೇಷ್ಮಾ, ಅನುಸೂಯವ್ವ, ಸಂಜೀವಪ್ಪ ಸೇರಿದಂತೆ ನೂರಾರು ಕಾರ್ಮಿಕರು ಭಾಗವಹಿಸಿದ್ದರು.
Leave a comment