ವಿಜಯನಗರ : ಇತ್ತೀಚೆಗೆ ಸಕ್ಕರೆ ಸೇರಿದಂತೆ ಅಗತ್ಯ ದಿನಸಿ ಪದಾರ್ಥಗಳ ಬೆಲೆ ಗಣನೀಯವಾಗಿ ಏರಿಳಿತವಾಗುತ್ತಿದೆ. ಅದನ್ನೇ ಬಂಡವಾಳವಾಗಿಸಿಕೊಂಡು ಕೆಲವು ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳು ಸಕ್ಕರೆ ಹಾಗೂ ದಿನಸಿ ಪದಾರ್ಥಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಮಾರುಕಟ್ಟೆಯ ದರ, ವ್ಯಾಪಾರ ವಹಿವಾಟು ಹಾಗೂ ಗ್ರಾಹಕರ ಹಿತಾಸಕ್ತಿ ಕುರಿತು ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಕ್ಕರೆಯನ್ನು ಅಗತ್ಯ ಸರಕುಗಳ ವ್ಯಾಪ್ತಿಗೆ ಒಳಪಡಿಸಲಾಗಿದ್ದು, ನವೆಂಬರ್‌ವರೆಗೆ ನಿಯಮ ಜಾರಿಯಲ್ಲಿರಲಿದೆ. ವರ್ತಕರು ಹಾಗೂ ಸಗಟು ಮಾರಾಟಗಾರರು ತಮ್ಮ ವಾಸ್ತವಿಕ ಸಕ್ಕರೆ ದಾಸ್ತಾನು ವಿವರಗಳನ್ನು ಆನ್‌ಲೈನ್‌ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. ಪ್ರತಿ ಶುಕ್ರವಾರ ದಾಸ್ತಾನು ಘೋಷಣೆ ಮಾಡಬೇಕು.
ಗರಿಷ್ಠ 4 ಸಾವಿರ ಕ್ವಿಂಟಾಲ್ ಮಿತಿಗಿಂತ ಹೆಚ್ಚಿನದಾಗಿ ಅನಧಿಕೃತವಾಗಿ ದಾಸ್ತಾನಿಡುವಂತಿಲ್ಲ. ದಾಸ್ತಾನು ಮಾಡಲು ಬಳಸುವ ಎಲ್ಲಾ ಅಧಿಕೃತ ಹಾಗೂ ಪರ್ಯಾಯ ಗೋಡೌನ್‌ಗಳ ವಿವರಗಳನ್ನು ಇಲಾಖೆಗೆ ಮುಂಚಿತವಾಗಿ ಸಲ್ಲಿಸಿ ಅನುಮತಿ ಪಡೆಯಬೇಕು. ಹೋಟೆಲ್‌ಗಳು ಸೇರಿದಂತೆ ಬಲ್ಕ್ ಗ್ರಾಹಕರಿಗೆ ಇಲಾಖೆಯ ಪೂರ್ವಾನುಮತಿ ಇಲ್ಲದೆ ಸಗಟು ಪ್ರಮಾಣದಲ್ಲಿ ಸಕ್ಕರೆ ಪೂರೈಸುವಂತಿಲ್ಲ ಎಂದರು.
ಸಾರ್ವಜನಿಕರಿಗೆ ತೊಂದರೆಯಾಗದಂತೆ ಪ್ರತಿ ಅಂಗಡಿಯಲ್ಲೂ ಸಕ್ಕರೆ, ಬೇಳೆಕಾಳು, ಖಾದ್ಯ ತೈಲ ಸೇರಿದಂತೆ ಪ್ರಮುಖ ದಿನಸಿ ಪದಾರ್ಥಗಳ ದರಪಟ್ಟಿ ಹಾಗೂ ದಾಸ್ತಾನು ಘೋಷಣೆ ಫಲಕವನ್ನು ಸಾರ್ವಜನಿಕರಿಗೆ ಕಾಣುವಂತೆ ಕಡ್ಡಾಯವಾಗಿ ಪ್ರದರ್ಶಿಸಬೇಕು. ಪ್ಯಾಕ್ ಮಾಡಿದ ಸರಕುಗಳನ್ನು ಮುದ್ರಿತ ಒಖP ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಅಪರಾಧವಾಗಿದ್ದು, ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಕಡಕ್ ಸೂಚನೆ ನೀಡಿದರು.
ವರ್ತಕರು ಖರೀದಿ ಮತ್ತು ಮಾರಾಟ ಬಿಲ್‌ಗಳು, ಸ್ಟಾಕ್ ರಿಜಿಸ್ಟರ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಿ, ಅಧಿಕಾರಿಗಳ ತಪಾಸಣೆ ಸಂದರ್ಭದಲ್ಲಿ ಹಾಜರುಪಡಿಸಬೇಕು. ತೂಕ ಮತ್ತು ಅಳತೆ ಯಂತ್ರಗಳನ್ನು ನಿಗದಿತ ಅವಧಿಯಲ್ಲಿ ಮರುಮಾಪನ (ಕ್ಯಾಲಿಬ್ರೇಷನ್) ಮಾಡಿಸಿ ಪ್ರಮಾಣಪತ್ರ ಹೊಂದಿರಬೇಕು. ಆಹಾರ ಪದಾರ್ಥ ಮಾರಾಟ ಮಾಡುವವರು ಎಫ್‌ಎಸ್‌ಎಸ್‌ಎಐ ಪರವಾನಗಿ ಹೊಂದಿದ್ದು, ಅದನ್ನು ಕಾಲಕಾಲಕ್ಕೆ ನವೀಕರಿಸಬೇಕು. ನೆರೆಯ ಜಿಲ್ಲೆಗಳಿಗೆ ಹೋಲಿಸಿದರೆ ಸ್ಥಳೀಯ ಮಾರುಕಟ್ಟೆಯಲ್ಲಿ ದಿನಸಿ ಹಾಗೂ ತರಕಾರಿ ಬೆಲೆಗಳು ಹೆಚ್ಚಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಾರುಕಟ್ಟೆಯ ಮೇಲೆ ನಿರಂತರ ನಿಗಾ ವಹಿಸಬೇಕು.
ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟ ವರ್ತಕರ ವಿರುದ್ಧ ಕಾನೂನುಬದ್ಧ ಹಾಗೂ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ದಿನಬಳಕೆ ತರಕಾರಿಗಳನ್ನು ಸಹ ಸಾರ್ವಜನಿಕರಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡದೇ ನ್ಯಾಯಸಮ್ಮತವಾದ ಬೆಲೆಗೆ ಮಾರಾಟ ಮಾಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ರಿಯಾಜ್ ಸೇರಿದಂತೆ ಸಗಟು ಮತ್ತು ಚಿಲ್ಲರೆ ಅಂಗಡಿ ಮಾಲೀಕರು ಇದ್ದರು.
Leave a comment