Home ವಿಜಯನಗರ ಡಿಸಿ ಎಲ್ಲೆಲ್ಲಿ ಬರ ಅಧ್ಯಯನ ಮಾಡಿದರು :
Homeಸುದ್ದಿಗಳು

ವಿಜಯನಗರ ಡಿಸಿ ಎಲ್ಲೆಲ್ಲಿ ಬರ ಅಧ್ಯಯನ ಮಾಡಿದರು :

Share
Share

ವಿಜಯನಗರ(ಹೊಸಪೇಟೆ) : ವಿಜಯನಗರ ಜಿಲ್ಲೆ ರಾಜ್ಯದಲ್ಲಿಯೇ ಅತಿ ಕಡಿಮೆ ಮಳೆಯಾಗಿರುವ ಜಿಲ್ಲೆಯಾಗಿದ್ದು, ಬರದ ಛಾಯೆ ಆವರಿಸಿದೆ. ಈ ನಿಟ್ಟಿನಲ್ಲಿ ಮಳೆಯಾಶ್ರಿತ ಜಮೀನುಗಳಿಗೆ ಬೇಟಿ ನೀಡಿ ಬರ ಅಧ್ಯಯನ ನಡೆಸಿ ಅಲ್ಲಿನ ನೈಜ ಸ್ಥಿತಿಯನ್ನು ಪರಿಶೀಲಿಸಿದ ವರದಿಯನ್ನು ಒಂದು ವಾರದೊಳಗಾಗಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಅವರು ಮಾಹಿತಿ ನೀಡಿದರು.

ಜಿಲ್ಲೆಯಾದ್ಯಂತ ಪ್ರಸಕ್ತ ಸಾಲಿನಲ್ಲಿ ತೀವ್ರ ಮಳೆ ಕೊರತೆಯಾಗಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಅಭಾವ ಎದುರಿಸುತ್ತಿರುವ ಜಿಲ್ಲೆಯಾಗಿ ಗುರುತಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕೃಷಿ ಬೆಳೆ ಹಾನಿ, ಕುಡಿಯುವ ನೀರು ಹಾಗೂ ಉದ್ಯೋಗ ಖಾತರಿ ಯೋಜನೆ ಕುರಿತು ಜಿಲ್ಲಾಡಳಿತ ನೈಜ ವಸ್ತು ಸ್ಥಿತಿ ಗಂಭೀರತೆಯ ಪರಿಶೀಲನೆಗೆ ಖುದ್ದು ಜಿಲ್ಲಾಧಿಕಾರಿಗಳೊಂದಿಗಿನ ತಂಡ ಜಿಲ್ಲೆಯ ವಿವಿಧ ತಾಲ್ಲೂಕಿನ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಅವರು, ಜಿಲ್ಲೆಯಲ್ಲಿ ಸರಾಸರಿ ಶೇ.60 ರಷ್ಟು ತೀವ್ರ ಮಳೆ ಕೊರತೆ ದಾಖಲಾಗಿದೆ. ಆದ್ದರಿಂದ ಪ್ರತಿಯೊಂದು ತಾಲೂಕಿನಲ್ಲೂ ಆಯ್ದ ಕೃಷಿ ಭೂಮಿಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಜಮೀನುಗಳ ಪರಿಸ್ಥಿತಿ, ಬೆಳೆ ನಷ್ಟ ಮತ್ತು ರೈತರ ಸಂಕಷ್ಟದ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಕಳೆದ ಎರಡು-ಮೂರು ತಿಂಗಳುಗಳಿಂದ ಸೂಕ್ತ ಮಳೆಯಾಗದೆ ತಾಲೂಕಿನಾದ್ಯಂತ ಬೆಳೆ ಹಾನಿಯಾಗಿದ್ದು, ರೈತರು ಹಾಗೂ ಕೃಷಿ ಕಾರ್ಮಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಉದ್ಯೋಗ ಆರಸಿ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ವಿ ಬಿ ಜಿ ರಾಮ್ ಜಿ ಯೋಜನೆಯಡಿ ಪ್ರತಿಯೊಂದು ಗ್ರಾಮ ಪಂಚಾಯತಿಯಲ್ಲಿ ತಕ್ಷಣವೇ ಕಾಮಗಾರಿಗಳನ್ನು ಆರಂಬಿಸಿ ದುಡಿಯುವ ಕೈಗಳಿಗೆ ಕೆಲಸ ನೀಡಲಾಗುವುದು. ಸ್ಥಳೀಯವಾಗಿಯೇ ಉದ್ಯೋಗ ದೊರೆಯುವುದರಿಂದ ಗ್ರಾಮಸ್ಥರು ಮತ್ತು ಕೂಲಿ ಕಾರ್ಮಿಕರು ಗುಳೆ ಹೋಗಬಾರದೆಂದು ಮನವಿ ಮಾಡಿದರು.

ಮಕ್ಕಳ ಶಿಕ್ಷಣಕ್ಕೆ ಧಕ್ಕೆ ತರಬೇಡಿ: ಪೋಷಕರು ಕೆಲಸದ ಹುಡುಕಾಟದಲ್ಲಿ ಮಕ್ಕಳನ್ನು ಶಾಲೆಯಿಂದ ಬಿಡಿಸಿ ತಮ್ಮೊಂದಿಗೆ ಕರೆದೊಯ್ಯಬಾರದು. ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ನೋಡಿಕೊಳ್ಳುವುದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಪೋಷಕರು ಮತ್ತು ಸ್ಥಳೀಯ ಆಡಳಿತದ ಜವಾಬ್ದಾರಿ ಎಂದರು.

ರೈತರಿಗೆ ಬೆಳೆ ವಿಮೆ ಆಸರೆ: ಮಳೆ ಅಭಾವದಿಂದ ಉಂಟಾಗಿರುವ ಬೆಳೆ ನಷ್ಟಕ್ಕೆ ಪರಿಹಾರ ಕಂಡುಕೊಳ್ಳಲು ರೈತರು ತಪ್ಪದ ಬೆಳೆ ವಿಮೆಗೆನೋಂದಾಯಿಸಿಕೊಳ್ಳಬೇಕು. ಇದರಿಂದ ರೈತರ ಆರ್ಥಿಕ ನಷ್ಟವನ್ನು ತಗ್ಗಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ – ಎನ್ಯಾಮರೇಷನ್ ಫಾರ್ಮ್ ಭರ್ತಿ ಮಾಡಿ ನೀಡಿ : ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಭರದಿಂದ ಸಾಗುತ್ತಿದೆ. ಬಿ.ಎಲ್.ಒ ಅಧಿಕಾರಿಗಳು ಮನೆ ಮನೆಗೆ ತಲುಪಿಸಿರುವ ಎನ್ಯುಮರೇಷನ್ ಫಾರ್ಮ್ಗಳನ್ನು ನಾಗರಿಕರು ಸರಿಯಾಗಿ ಭರ್ತಿ ಮಾಡಿ ತಕ್ಷಣ ಮರಳಿಸಬೇಕು. ತಪ್ಪಿದ್ದಲ್ಲಿ ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.

ಜಿ.ಪಂ. ಸಿಇಒ ನೊಂಗ್ಜಾಯ್ ಮಹ್ಮದ್ ಅಲಿ ಅಕ್ರಮ್ ಷಾ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿ ತೀವ್ರ ಮಳೆ ಕೊರತೆಯಿದ್ದು, ಸಾರ್ವಜನಿಕರು, ಕೂಲಿ ಕಾರ್ಮಿಕರು ವಲಸೆ ಹೋಗುತ್ತಿದ್ದಾರೆ. ವಲಸೆ ತಡೆಯಲು ವಿ ಬಿ ಜಿ ರಾಮ್ ಜಿ ಯೋಜನೆಯಡಿ ಸುಮಾರು 318 ಕಾಮಗಾರಿಗಳು ಚಾಲ್ತಿಯಲ್ಲಿವೆ. ಮುಂಬರುವ ದಿನಗಳಲ್ಲಿ ಎಲ್ಲಾ ಶ್ರಮಿಕ ವರ್ಗಕ್ಕೆ, ಕೂಲಿ ಕಾರ್ಮಿಕರಿಗೆ, ರೈತರಿಗೆ ಉದ್ಯೋಗ ಒದಗಿಸುವ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಪ್ರಸ್ತುತ 36 ಗ್ರಾಮಗಳಲ್ಲಿ ನೀರಿನ ಅಭಾವ ಉಂಟಾಗಿದ್ದು, ಅದಕ್ಕೆ 46 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ಕುಡಿಯುವ ನೀರು ಪೂರೈಸಲಾಗುತ್ತಿದೆ. ವಿಶೇಷವಾಗಿ ಹೂವಿನಹಡಗಲಿ, ಹರಪನಹಳ್ಳಿ ತಾಲೂಕಿನ ಅರಸಿನಕೇರಾ, ಕೂಡ್ಲಿಗಿ ಭಾಗದಲ್ಲಿ ನೀರು ಪೂರೈಕೆಗೆ ಸೂಕ್ತ ಕ್ರಮ ವಹಿಸಲಾಗಿದೆ. ಕೊಟ್ಟೂರು ಮತ್ತು ಹೊಸಪೇಟೆ ತಾಲೂಕುಗಳಲ್ಲಿ ಯಾವುದೇ ರೀತಿಯ ಗಂಭೀರ ಸಮಸ್ಯೆಯಿಲ್ಲದಿದ್ದರೂ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಪೋಷಕರು ಕೂಲಿ ಅರಸಿ ವಲಸೆ ಹೋಗುವ ಸಂದರ್ಭದಲ್ಲಿ ಮಕ್ಕಳನ್ನು ಜೊತೆಯಲ್ಲಿ ಕರೆದೊಯ್ಯಬಾರದು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ವಲಸೆ ಹೋಗುವ ಕುಟುಂಬಗಳ ಮಕ್ಕಳ ಶಾಲಾ ಶಿಕ್ಷಣಕ್ಕೆ ತೊಂದರೆಯಾಗದಂತೆ, ಅವರನ್ನು ಸ್ಥಳೀಯ ವಸತಿ ನಿಲಯಗಳಲ್ಲಿ ಉಳಿದುಕೊಳ್ಳಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಸ್ವತಃ ಜಿಲ್ಲಾಧಿಕಾರಿಗಳಿಂದ ಬರ ಪರಿಶೀಲನೆ: ಜಿಲ್ಲಾಧಿಕಾರಿ ಅವರು ಅಧಿಕಾರಿಗಳ ತಂಡಗಳೋಂದಿಗೆ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ನಂದಿಬಂಡಿ, ಹಂಪಾಪಟ್ಟಣ, ಮಾದೂರು ಗ್ರಾಮದ ಕೃಷಿ ಜಮೀನು, ಹಗರಿಬೊಮ್ಮನಹಳ್ಳಿ, ಹಡಗಲಿ ತಾಲೂಕಿನ ಇಟಗಿ, ಹರಪನಹಳ್ಳಿ ತಾಲೂಕಿನ ಮೈದೂರು ಮತ್ತು ಚಿಗಟೇರಿ, ಹರಪನಹಳ್ಳಿ ತಾಲೂಕಿನ ನಿಚಾಪುರ, ಕೊಟ್ಟೂರು ತಾಲೂಕಿನ ಮಲ್ಲನಾಯಕನಹಳ್ಳಿಗಳಲ್ಲಿ ಬೇಟಿ ನೀಡಿ ಮೆಕ್ಕೆಜೋಳ, ಜೋಳ, ತೊಗರಿ, ಈರುಳ್ಳಿ ಹಾಗೂ ಕಬ್ಬು ಬೆಳೆಗಳನ್ನು ವೀಕ್ಷಿಸಿ ರೈತರ ಸಂಕಷ್ಟಗಳನ್ನು ಆಲಿಸಿದ ಅವರು ಬೆಳೆ ಹಾನಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ ನಷ್ಟ ಪರಿಹಾರ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಹಂಪಾಪಟ್ಟಣ ಗ್ರಾಮ ಪಂಚಾಯಿತಿಯ ರಾಯರಾಳ್ ತಾಂಡಾ ರೈತರೊಬ್ಬರು 1.76 ಎಕರೆ ಭೂಮಿಯಲ್ಲಿ ಕಬ್ಬು ನಾಟಿ ಮಾಡಲಾಗಿದೆ. ಇದೇ ಭೂಮಿಯಲ್ಲಿ ನಾಲ್ಕು ಕೊಳವೆ ಬಾವಿ ಕೊರೆಸಲಾಗಿದೆ. ಮಳೆ ಕೊರತೆಯಿಂದ ಕೊಳವೆ ಬಾವಿ ಸಂಪೂರ್ಣ ಬತ್ತಿ ಹೋಗಿವೆ. ಕಬ್ಬು ಪ್ರಸ್ತುತ 9 ತಿಂಗಳ ಬೆಳೆಯಾಗಿದ್ದು, ನೀರಿಲ್ಲದೆ ಬೆಳೆ ಒಣಗಿ ನೆಲಕ್ಕಚುತ್ತಿದೆ. ಹೀಗಿದ್ದರೂ ಕಬ್ಬು ಬೆಳೆ ವಿಮಾ ವ್ಯಾಪ್ತಿಗೆ ಒಳಪಡುವುದಿಲ್ಲ.

ಆದ್ದರಿಂದ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿ ಕಂಗಾಲಾಗಿದ್ದಾರೆ. ಅದಲ್ಲದೇ ಮುಂದೇನು ಎಂಬ ಪ್ರಶ್ನೆ ಕಬ್ಬು ಬೆಳೆಗಾರರನ್ನು ದಟ್ಟವಾಗಿ ಕಾಡುತ್ತಿದೆ ಎಂದು ರೈತರೊಬ್ಬರು ಅವರ ಸಂಕಷ್ಟ ತೋಡಿಕೊಂಡರು. ತಾಲ್ಲೂಕಿನ ನಂದಿಬಂಡಿ ಗ್ರಾಮದಲ್ಲಿ ವಿವಿಧೆಡೆ ಜೋಳ, ತೊಗರಿ ಬಿತ್ತನೆ ಮಾಡಲಾಗಿದೆ.

ಅದರಲ್ಲಿ ರೈತನೋರ್ವ 4ಎಕರೆ ಭೂಮಿಯಲ್ಲಿ ಮೊದಲ ಬಾರಿ ಜೋಳ ಮತ್ತು ತೊಗರಿ ಬಿತ್ತನೆ ಮಾಡಿದ ಸಂದರ್ಭದಲ್ಲಿ ಸಕಾಲಕ್ಕೆ ಮಳೆ ಬಾರದೆ, ಬಿತ್ತನೆ ಮಾಡಿದ ಬೀಜ ಮೊಳಕೆಯೊಡೆಯಲೇ ಇಲ್ಲಾ. 4 ಎಕರೆ ಭೂಮಿಯಲ್ಲಿ ಮತ್ತೊಮ್ಮೆ ಬಿತ್ತನೆ ಮಾಡಲಾಗಿದೆ. ಆದರೆ ಈ ಬಾರಿಯೂ ಆಶಾದಾಯಕ ಮಳೆ ಇಲ್ಲದೇ ಬೆಳೆ ಸೊರಗುತ್ತಿದೆ. ಬಿತ್ತನೆ ಬೀಜ ಗೊಬ್ಬರ ಸೇರಿ ಹಾಕಿದ ಬಂಡವಾಳವೂ ಕೈ ಸೇರುವುದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಈ ವೇಳೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ, ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ದೀಪಾ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಮಂಜುನಾಥ್, ಉಪನಿರ್ದೇಶಕ ವಾಮದೇವ ಕೊಳ್ಳಿ, ಸಹಾಯಕ ನಿರ್ದೇಶಕ ಎಸ್.ಮನೋಹರ್ ಗೌಡ, ಹಗರಿಬೊಮ್ಮನಹಳ್ಳಿ ಕೃಷಿ  ಇಲಾಕೆ ಸಹಾಯಕ ನಿರ್ದೇಶಕ ಎಸ್.ಪಿ.ಪಾಟೀಲ್, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಅಧಿಕಾರಿಗಳು ಇದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಕಲಬುರಗಿಯ ಸೇಂಟ್ ಮೇರಿಸ್ ಶಾಲೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ

ಕಲಬುರಗಿ: ಕೊಟನೂರಿನ ಸೇಂಟ್ ಮೇರಿಸ್ ಶಾಲೆಯಲ್ಲಿ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಕಡಗಂಚಿ, ಅಲ್...

Homeಸುದ್ದಿಗಳು

ಕ್ರೀಡಾಕೂಟಗಳು ಸ್ಪರ್ಧೆಯಾಗದೆ,ಹಬ್ಬದ ಸಂಭ್ರಮವಾಗಲಿ:ಶಾಸಕ ಬಿ.ದೇವೇಂದ್ರಪ್ಪ ಅಭಿಮತ.

ಹರಪನಹಳ್ಳಿ : ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟಗಳು ಕೇವಲ ಸ್ಪರ್ಧೆಯಾಗದೆ, ಹಬ್ಬದ ಸಂಭ್ರಮ ಮನೆಮಾಡಬೇಕು ಎಂದು ಶಾಸಕ...

Homeಸುದ್ದಿಗಳು

ಸೆ.19ರಂದು ಹರಪನಹಳ್ಳಿಯಲ್ಲಿ ತಾಲ್ಲೂಕು ಮಟ್ಟದ ಪ್ರಜಾಸೇವಾ ಕಾರ್ಯಕ್ರಮ

ವಿಜಯನಗರ : ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಜಿಲ್ಲೆಯ...

Homeಸುದ್ದಿಗಳು

ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ : ಕಾಲಮಿತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಕ್ರಮ

ವಿಜಯನಗರ : ಸಾರ್ವಜನಿಕರು ತಮ್ಮ ದಿನನಿತ್ಯದ ಸಮಸ್ಯೆಗಳು, ಬೇಡಿಕೆಗಳು ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳಿಗಾಗಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.