ವಿಜಯನಗರ : ಮುಂಗಾರು ಹಂಗಾಮು ಹಿನ್ನೆಲೆಯಲ್ಲಿ ಬಿತ್ತನೆ ಕೃಷಿ ಚಟುವಟಿಕೆ ಆರಂಭವಾಗಿದ್ದು, ಯಾವುದೇ ರೀತಿಯ ಬಿತ್ತನೆ ಬೀಜ, ರಸಗೊಬ್ಬರ ಅಭಾವ ಎದುರಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಹಾಗೂ ಕೃತಕ ಅಭಾವ ಸೃಷ್ಟಿಸುವ ವರ್ತಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ನಿರ್ದೇಶಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜುಲೈ ಮೊದಲ ವಾರದಿಂದ ಮುಂಗಾರು ಹಂಗಾಮು ಮಳೆಗಾಲ ಆರಂಭವಾಗಲಿದೆ. ಈಗಾಗಲೇ ಜಿಲ್ಲಾದ್ಯಂತ ಕೃಷಿ ಚಟುವಟಿಕೆಗಳು ಭರದಿಂದ ಸಾಗುತ್ತಿವೆ. ಪ್ರಸಕ್ತ ಸಾಲಿನಲ್ಲಿ ಭತ್ತ 13827 ಎಕರೆ ಪ್ರದೇಶದಲ್ಲಿ ಭಿತ್ತನೆಗೆ ಗುರಿ ಹೊಂದಿದ್ದು, ಈ ಪೈಕಿ ಕೇವಲ 2230 ಎಕರೆ ಪ್ರದೇಶದಲ್ಲಿ ಭಿತ್ತನೆ ಮಾಡಲಾಗಿದೆ.
ಜೋಳ ಎಂಟು ಸಾವಿರ ಎಕರೆಯಲ್ಲಿ ಭಿತ್ತನೆ ಗುರಿಯಲ್ಲಿ 3161 ಎಕರೆಯಲ್ಲಿ, ರಾಗಿ 14000 ಭಿತ್ತನೆ ಗುರಿಗೆ 570, ಮುಸುಕಿನ ಜೋಳ 207591 ಎಕರೆ ಪ್ರದೇಶದಲ್ಲಿ ಭಿತ್ತನೆಗೆ ಗುರಿ ಹೊಂದಿತ್ತಾದರೂ 70696 ಹಾಗೂ ಸಜ್ಜೆ ಐದು ಸಾವಿರ ಎಕರೆಯಲ್ಲಿ ಭಿತ್ತನೆ ಗುರಿಗೆ ಕೇವಲ 53 ಎಕರೆ ಪ್ರದೇಶದಲ್ಲಿ ಭಿತ್ತನೆ ಸೇರಿ ಒಟ್ಟು 249638 ಎಕರೆ ಭಿತ್ತನೆ ಪ್ರದೇಶ ಗುರಿ ಪೈಕಿ ಮುಂಗಾರು ಮಳೆ ಕೊರತೆಯಿಂದಾಗಿ 76710 ಪ್ರದೇಶದಲ್ಲಿ ಭಿತ್ತನೆ ಮಾಡುವ ಮೂಲಕ ಶೇ.30ರಷ್ಟು ಮಾತ್ರ ಪ್ರಗತಿ ಸಾಧಿಸಿದೆ.
ಜಿಲ್ಲೆಯಾದ್ಯಂತ ಅಲ್ಲಲ್ಲಿ ಮಳೆಯಾಗುತ್ತಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಆದ್ದರಿಂದ ಯೂರಿಯಾ, ಡಿ.ಎ.ಪಿ, ಪೊಟ್ಯಾಶ್ ಹಾಗೂ ಕಾಂಪ್ಲೆಕ್ಸ್ ಗೊಬ್ಬರಗಳ ಬೇಡಿಕೆಗ ತಕ್ಕಂತೆ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ನೋಂದಾಯಿತ ಖಾಸಗಿ ಡೀಲರ್‌ಗಳ ಬಳಿ ಸದ್ಯಕ್ಕೆ ಪ್ರಸ್ತುತ ಅಗತ್ಯಕ್ಕೆ ಬೇಕಾದಷ್ಟು ದಾಸ್ತಾನಿರಬೇಕು ಎಂದು ತಾಕೀತು ಮಾಡಿದರು.
ಕೆಲವು ಕಡೆ ರಸಗೊಬ್ಬರಗಳ ಜೊತೆಗೆ ಬೇಡಿಕೆಯಿಲ್ಲದ ಪೋಷಕಾಂಶಗಳು ಅಥವಾ ಇತರೆ ಉತ್ಪನ್ನಗಳನ್ನು ಕಡ್ಡಾಯವಾಗಿ ಖರೀದಿಸಬೇಕೆಂದು ರೈತರಿಗೆ ಒತ್ತಾಯಿಸುವ ದೂರುಗಳು ಕೇಳಿಬರುತ್ತಿವೆ. ಇಂತಹ ದಂಧೆಯಲ್ಲಿ ತೊಡಗುವ ಅಥವಾ ನಿಗದಿತ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ದರಕ್ಕೆ ಗೊಬ್ಬರ ಮಾರುವ ಅಂಗಡಿಗಳ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನಿರ್ದೇಶಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಯಮಾನುಸಾರ ಪ್ರತಿಯೊಬ್ಬ ರೈತರಿಗೂ ಕಡ್ಡಾಯವಾಗಿ ಪಿಓಎಸ್ ಯಂತ್ರದ ಮೂಲಕ, ಆಧಾರ್ ಕಾರ್ಡ್ ಪಡೆದು ಬಯೋಮೆಟ್ರಿಕ್ ದೃಢೀಕರಣದ ಆಧಾರದ ಮೇಲೆಯೇ ರಸಗೊಬ್ಬರ ವಿತರಿಸಬೇಕು. ಇದರಿಂದ ರಸಗೊಬ್ಬರ ಕಳ್ಳಸಾಗಣೆ, ದುರ್ಬಳಕೆ ಸಂಪೂರ್ಣವಾಗಿ ತಡೆಯಬಹುದು ಎಂದ ಅವರು, ರೈತರು ಕೇವಲ ಯೂರಿಯಾ ಮತ್ತು ಡಿಎಪಿ ಗೊಬ್ಬರಗಳ ಮೇಲೆಯೇ ಅವಲಂಬಿತರಾಗದೆ, ಮಣ್ಣಿನ ಫಲವತ್ತತೆ ಸಮತೋಲಿತ ಕಾಪಾಡಲು ತಂತ್ರಜ್ಞಾನ ಆಧಾರಿತ ಹಾಗೂ ಅತ್ಯಂತ ಪರಿಣಾಮಕಾರಿಯಾದ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಬಳಕೆಯನ್ನು ಹೆಚ್ಚಿಸಬೇಕು.
ಕೃಷಿ ಇಲಾಖೆಯು ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸೂಚಿಸಿದರು. ರೈತರ ಬೆಳೆ ಸಮೀಕ್ಷೆ ಮತ್ತು ಬೆಳೆ ವಿಮೆ ಪ್ರಕ್ರಿಯೆಯನ್ನು ಯಾವುದೇ ಲೋಪದೋಷಗಳಿಲ್ಲದೆ ಸರಿಯಾದ ರೀತಿಯಲ್ಲಿ ಪೂರ್ಣಗೊಳಿಸಬೇಕು. ಅಧಿಕಾರಿಗಳು ಯಾವುದೇ ರೀತಿಯ ಆಸೆ, ಆಮಿಷಗಳಿಗೆ ಒಳಗಾಗದೆ, ಅತ್ಯಂತ ಪಾರದರ್ಶಕವಾಗಿ ಮತ್ತು ಪ್ರಾಮಾಣಿಕವಾಗಿ ಈ ಕಾರ್ಯವನ್ನು ನಿಭಾಯಿಸಬೇಕು.
ಒಂದು ವೇಳೆ ವೈಯಕ್ತಿಕ ಲಾಭ ಅಥವಾ ಆಸೆ ಆಮಿಷಗಳಿಗೆ ಬಲಿಯಾಗಿ ಬೆಳೆ ಸಮೀಕ್ಷೆಯಲ್ಲಿ ಯಾವುದೇ ರೀತಿಯ ಲೋಪದೋಷ ಎಸಗಿದರೆ ಅಥವಾ ಅಕ್ರಮಗಳಲ್ಲಿ ಭಾಗಿಯಾಗಿದ್ದು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವಿಮಾ ಕಂಪನಿಯ ವಿರುದ್ಧ ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಕೃಷಿ ಇಲಾಖೆಯ ಅಧಿಕಾರಿಗಳು ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬೇಡಿಕೆಗಾಗಿ ಯೂರಿಯಾ, ಡಿಎಪಿ ಇನ್ನಿತರೆ ರಸಗೊಬ್ಬರ ಸೇರಿ ಒಟ್ಟು 133543 ಮೆಟ್ರಿಕ್ ಟನ್ ಬೇಡಿಕೆ ಇದ್ದು, ಅದರಂತೆ ಪ್ರಸ್ತುತ 74538 ಮೆಟ್ರಿಕ್ ಟನ್ ದಾಸ್ತಾನುಮಾಡಲಾಗಿದೆ.ಅದರಲ್ಲಿ ಈವರೆಗೆ 49776 ಮೆಟ್ರಿಕ್ ಟನ್ ಗೊಬ್ಬರ ರೈತರಿಗೆವಿತರಿಸಿದ್ದು, 24762 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನಿದೆ ಎಂದರು.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಸಾಲ ಪಡೆಯಲು ಬಯಸುವ ರೈತರು ಕಡ್ಡಾಯವಾಗಿ ಬೆಳೆ
ವಿಮೆಯಡಿ ಅಧಿಸೂಚಿತ ಬೆಳೆಗೆ ನೋಂದಾಯಿಸಿಕೊಳ್ಳಲು ಯಾವುದೇ ಬ್ಯಾಂಕುಗಳಲ್ಲಿ ಸಾಲ ಅಥವಾ ಕೃಷಿ ಸಾಲ ಮಂಜೂರಾಗಿರುವುದಿಲ್ಲವೆಂದು ಸ್ವಯಂ-ಘೋಷಣೆ ಸಲ್ಲಿಸಬೇಕು. ಬೆಳೆ ವಿಮೆ ಮಾಡಿಸಲು ಜೋಳ, ತೊಗರಿ, ಸೂರ್ಯಕಾಂತಿ, ಮುಸುಕಿನ ಜೋಳ, ಹತ್ತಿ ಮತ್ತು ಈರುಳ್ಳಿ ಬೆಳೆಗಳಿಗೆ ಜುಲೈ 31 ಹಾಗೂ ಭತ್ತ, ರಾಗಿ, ನವಣೆ, ಹುರುಳಿ, ನೆಲಗಡಲೆ ಹಾಗೂ ಸಜ್ಜೆ ಬೆಳೆಗಳಿಗೆ ಆಗಸ್ಟ್ 14 ಕೊನೆಯ ದಿನವಾಗಿದೆ.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ 1,88,285 ರೈತರು ನೋಂದಾಯಿಸಿಕೊಂಡಿದ್ದು , ಈ ಪೈಕಿ ಅರ್ಹ 14,477 ರೈತರು ರೂ.1,753 ಲಕ್ಷ ವಿಮಾ ಸೌಲಭ್ಯ ಪಡೆದಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಜಿಲ್ಲಾದ್ಯಂತ 1,29,684 ಅರ್ಹ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ ರೂ.46,748 .58 ಲಕ್ಷ ಹಾಗೂ ರಾಜ್ಯ ಸರ್ಕಾರದಿಂದ ರೂ.13,432.06 ಲಕ್ಷ ಸೇರಿ ಒಟ್ಟು ರೂ.60,180.64 ಲಕ್ಷ ಮೊತ್ತ ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಬೆಳೆ ವಿಮೆ ಹಾಗೂ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಸಂಬಂದಿಸಿದ ಕರಪತ್ರ ಬಿಡುಗಡೆಗೊಳಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ನೊಂಗ್ಜಾಯ್ ಮಹ್ಮದ್ ಅಲಿ ಅಕ್ರಮ್ ಷಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಾಮದೇವ ಕೊಳ್ಳಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಿಯಾಜ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಪ್ರಭುರಾಜ್, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಜಿಲ್ಲಾ ಅಧಿಕಾರಿ ಪತ್ರಿಬಸಪ್ಪ, ಪಶು ಇಲಾಖೆ ಉಪನಿರ್ದೇಶಕ ಡಾ.ರವಿ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Leave a comment