Home ವಿಶೇಷ ವರದಿಗಳು words ಟಾಕ್‌ : ಸರ್ಕಾರಿ ಶಾಲೆಗಳನ್ನು ಮುಚ್ಚಲು ಅಣಿಯಾದರೇ ಮಧು ಬಂಗಾರಪ್ಪ?
ವಿಶೇಷ ವರದಿಗಳು

words ಟಾಕ್‌ : ಸರ್ಕಾರಿ ಶಾಲೆಗಳನ್ನು ಮುಚ್ಚಲು ಅಣಿಯಾದರೇ ಮಧು ಬಂಗಾರಪ್ಪ?

Share
ಮಧು ಬಂಗಾರಪ್ಪ?
Share

ಇಂಥದ್ದೊಂದು ಧಾವಂತದ ಸುದ್ದಿ ಶಿಕ್ಷಣ ಇಲಾಖೆ ಮೂಲಗಳಿಂದ ರಾಜ್ಯವ್ಯಾಪಿ ಪಸರಿಸುತ್ತಿದೆ. ಇದನ್ನು ಕೇಳಿಸಿಕೊಂಡು ಈಗಾಗಲೇ ಶಿಕ್ಷಣವನ್ನು ಮಾರುಕಟ್ಟೆಯ ಸರಕಾಗಿಸಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಭರ್ಜರಿ ಖುಷಿಯಲ್ಲಿದ್ದಾರೆ! ಇದುವರೆಗೂ ಸರ್ಕಾರ ವಿಧಿಸಿರುವ ಶುಲ್ಕಗಳಿಗಿಂತ ಅನಧಿಕೃತವಾಗಿ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡಿಕೊಂಡಿದ್ದ ಖಾಸಗಿ ಶಿಕ್ಷಣ ವಲಯ, ಸರ್ಕಾರಿ ಶಾಲೆಗಳ ಮುಚ್ಚುವಿಕೆಯಿಂದ ಮತ್ತಷ್ಟು ಪೊಗರ್ದಸ್ತಾಗಿ ಪೋಷಕರ ರಕ್ತ ಹೀರುವುದು ಖಾತ್ರಿ ಆಗಲಿದೆ! ನಿಜವಾಗಿಯೂ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಪೋಸಲ್ ಸರ್ಕಾರದ ಮುಂದಿದೆಯಾ? ಗೊತ್ತಿಲ್ಲ! ಆದರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಸ್ಥಾಪಿಸಬೇಕೆಂದು ಚನ್ನಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿ ಹೊರಡಿಸಿರುವ ಆದೇಶ ಮಾತ್ರ  ಇಂಥದ್ದೊಂದು ಅನುಮಾನಕ್ಕೆ ದೊಡ್ಡ ಸಾಕ್ಷ್ಯವನ್ನೇ ಒದಗಿಸಿದೆ!

ಒಂದು ದೇಶದ ಅಭಿವೃದ್ಧಿ ಮತ್ತದರ ಸಾಮಾಜಿಕ ಸಂರಚನೆಯು ಆರೋಗ್ಯಕರವಾಗಿ ಇರಬೇಕೆಂದರೆ, ಅಲ್ಲಿನ ಶಿಕ್ಷಣ ವ್ಯವಸ್ಥೆ ಸರ್ಕಾರದ ನಿಯಂತ್ರಣದಲ್ಲಿ ಇರಬೇಕು! ಇದು ರಾಜ್ಯಗಳಿಗೂ ಅನ್ವಯಿಸುತ್ತದೆ ಎಂಬುದನ್ನು ಒತ್ತಿ ಹೇಳಬೇಕಿಲ್ಲ!  ಪ್ರಾದೇಶಿಕ ಭಾಷೆಯ ಜೊತೆ ದೇಶದ ಇತರೆ ಎಲ್ಲಾ ರಾಜ್ಯಗಳೊಂದಿಗೆ ಸಂವಹನ ಮತ್ತು ಸೌಹಾರ್ದ ಸಂಬಂಧಗಳ ಬೆಸುಗೆಗಾಗಿ, ಸರ್ಕಾರಿ ಶಾಲೆಗಳು ಇದುವರೆಗೂ ಮಹೋನ್ನತ ಕೊಡುಗೆಗಳನ್ನೂ ಕೂಡ ದಯಪಾಲಿಸಿವೆ! ಅದರೊಟ್ಟಿಗೆ ಜಾತಿ, ಧರ್ಮ ಮತ್ತು ಭಾಷೆಗಳ ಉತ್ಪ್ರೇಕ್ಷೆಗಳಿಲ್ಲದೇ ಪ್ರತಿ ಮಗುವೂ ಕೂಡ ವಿಶ್ವಮಾನವ ಆಗಿ ರೂಪಗೊಳ್ಳುವಂತೆ ಸರ್ಕಾರಿ ಶಾಲೆಗಳು ತುಡಿಯುತ್ತಿವೆ! ಸರ್ಕಾರಿ ಶಿಕ್ಷಣ ವ್ಯವಸ್ಥೆ ಖಾಸಗಿಕರಣಗೊಂಡ ಬಳಿಕವೂ ಅದರ ವಿರುದ್ದ ಸೆಣಸಾಡುತ್ತಲೇ ತನ್ನ ಅಸ್ಮಿತೆ ಉಳಿಸಿಕೊಂಡಿರುವ ಸರ್ಕಾರಿ ಶಾಲೆಗಳು, ಗುಡಿ, ಚರ್ಚು, ಮಸೀದೆಗಳಿಗಿಂತ ಹೆಚ್ಚಾಗಿ ತನ್ನ ಮಡಿಲಲ್ಲಿ ಮಕ್ಕಳನ್ನು ನೈತಿಕವಾಗಿ ಸಲಹುತ್ತಿರುವುದು ಸುಳ್ಳೇನಲ್ಲ! ದೇಶದ ದಶ ದಿಕ್ಕುಗಳಲ್ಲಿಯೂ ಕುಂಟುತ್ತ, ತೆವಳುತ್ತ ಸರ್ಕಾರದ ಆತ್ಮಸಾಕ್ಷಿ ಎಂಬಂತೆ ಮಕ್ಕಳಿಗೆ ಶಿಕ್ಷಣ ಧಾರೆ ಎರೆಯುತ್ತಿರುವ ಸರ್ಕಾರಿ ಶಾಲೆಗಳು, ಇದೀಗ ಪಬ್ಲಿಕ್ ಶಾಲೆ ಆರಂಭ ಎಂಬ ಗುರಾಣಿಯ ಮುಂದೆ ಸದ್ದಿಲ್ಲದೇ ಮರೆಯಾಗುವಂತಹ ಅಪಾಯಕ್ಕೆ ಸಿಲುಕಿರುವುದು  ಯಾರ ಮರ್ಜಿಗಾಗಿ? ಶಿಕ್ಷಣ ಸಚಿವ ಮಧು ಬಂಗಾರಪ್ಪ  ಇದಕ್ಕೆ ಉತ್ತರಿಸಲು ತಡವರಿಸುತ್ತಿರುವುವುದು ನೋಡಿದರೆ ಇಲ್ಲೇನೋ ಸಂಚು ಅಡಗಿದೆ ಅಂತಲೇ ಅರ್ಥವಲ್ಲವೇ?

ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ(1948)

19ನೇ ವಿಧಿಯು ಹೇಳುವಂತೆ, ದೇಶದ ಪ್ರತಿಯೊಬ್ಬರಿಗೂ ಶಿಕ್ಷಣ ಪಡೆಯುವ ಮೂಲಭೂತ ಹಕ್ಕಿದೆ. ಕನಿಷ್ಠ ಪ್ರಾಥಮಿಕ ಮತ್ತು ಮೂಲಭೂತ ಹಂತಗಳಲ್ಲಿ ಶಿಕ್ಷಣವು ಉಚಿತವಾಗಿರಬೇಕು ಎಂಬುದನ್ನು ನಮ್ಮ‌ ಸಂವಿಧಾನ ಒತ್ತಿ ಹೇಳುತ್ತದೆ. ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿರಬೇಕು ಅದರೊಟ್ಟಿಗೆ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣವನ್ನು ಸಾಮಾನ್ಯವಾಗಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕು ಮತ್ತು ಉನ್ನತ ಶಿಕ್ಷಣಕ್ಕೆ ಎಲ್ಲರಿಗೂ ಅರ್ಹತೆಯ ಆಧಾರದಲ್ಲಿ ಸಮಾನವಾಗಿ ಪ್ರವೇಶಿಸುವ ಅವಕಾಶವಿರಬೇಕು ಎಂಬ ನಿಯಮ ದೇಶದಲ್ಲಿ ಜಾರಿಯಲ್ಲಿದೆ! ಹೀಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಾಳ ಎನಿಸಿಕೊಳ್ಳುವ ಶಿಕ್ಷಣದ ಮೂಲಭೂತ ಹಕ್ಕನ್ನು ಕೊಡಮಾಡುವಲ್ಲಿ ನಮ್ಮ ದೇಶ ಹಾಗೂ ರಾಜ್ಯದ ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿಸಿದರೆ, ಫಲಿತಾಂಶ ವ್ಯತಿರಿಕ್ತವಾಗಿ ಗೋಚರಿಸುತ್ತದೆ! ಇದಕ್ಕೆ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇತ್ತಿಚೆಗಷ್ಟೇ ಜಾರಿಗೊಳಿಸಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮತ್ತು ಕರ್ನಾಟಕದಲ್ಲಿ ಈಗ ಆರಂಭಿಸಲು ಹೊರಟಿರುವ ಪಬ್ಲಿಕ್ ಶಾಲೆಗಳ ಆರಂಭದ ಆದೇಶಗಳು ದೊಡ್ಡ ಮಟ್ಟದ ಸಾಕ್ಷ್ಯವನ್ನೇ ನುಡಿಯುತ್ತಿವೆ! ಇವೆರಡೂ ಆಯಾಮಗಳು ಆಂತರಿಕವಾಗಿ ಶಿಕ್ಷಣದ ಖಾಸಗೀರಣಕ್ಕೆ ಇನ್ನಿಲ್ಲದ ಶಕ್ತಿ ಒದಗಿಸಲು ಹಾತೊರೆಯುವುದನ್ನುಕೂಡ ರುಜುವಾತುಪಡಿಸುತ್ತಿವೆ!

ಸಮಾಜದ ಯಾವ ಸ್ಥರದ ಮಕ್ಕಳನ್ನು ಪೋಷಿಸುತ್ತಿದೆ?

ಇಸವಿ 1992 ರ ಆಸುಪಾಸಿನಲ್ಲಿ ದೇಶಾದ್ಯಂತ ಆರಂಭಗೊಂಡ ಶಿಕ್ಷಣದ ಖಾಸಗೀರಣದ ನೀತಿ ನಿಯಮಗಳು, ಪ್ರತಿರೋಧದ ನಡುವೆಯೂ ಬೇರೆ ಬೇರೆ ಮಾರ್ಗಗಳ‌ ಮೂಲಕ ಚಲಾವಣೆಗೆ ಬಂದುಬಿಟ್ಟವು! ಇದಕ್ಕೆಅಂದಿನ ಅರ್ಥ ಮಂತ್ರಿ ಮನಮೋಹನ್ ಸಿಂಗ್ ಕೊಟ್ಟ ಕೊಡುಗೆ ಸಣ್ಣದೇನಲ್ಲ! ಶಿಕ್ಷಣದ ಖಾಸಗೀಕರಣವೆಂದರೆ ಶಿಕ್ಷಣ ಸಂಸ್ಥೆಗಳ ಮಾಲೀಕತ್ವ ಮತ್ತು ನಿರ್ವಹಣೆಯನ್ನು ಸಾರ್ವಜನಿಕ ವಲಯದಿಂದ ಖಾಸಗಿ ಸಂಸ್ಥೆಗಳಿಗೆ ವರ್ಗಾಯಿಸುವುದಷ್ಟೇ ಎಂದು ಅಂದಿನ ಸರ್ಕಾರಗಳು ವಾದಿಸಿದ್ದವು. ಅದರ ಜೊತೆಗೆ ಖಾಸಗೀಕರಣದಿಂದ ಸ್ಪರ್ಧೆ ಮತ್ತು ದಕ್ಷತೆಯನ್ನು ಹೆಚ್ಚಿಸಬಹುದು ಎಂಬ ಅಭಿಪ್ರಾಯವನ್ನು ಸಾರ್ವಜನಿಕರಿಸಲ್ಪಡುವಂತೆಯೂ ಜನರನ್ನು ಪುಸಲಾಯಿಸಲಾಗಿತ್ತು! ಅಷ್ಟಲ್ಲದೇ ಮುಂದೊಂದು ದಿವಸ ಇದು ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಬಲ್ಲದು ಎಂಬ ಬಹತೇಕರ ಆತಂಕವನ್ನೂ ಹೀಯಾಳಿಸುವಂತಹ ಅಭಿಪ್ರಾಯವನ್ನು  ಕೂಡ ಸೆಟ್ ಮಾಡಿತ್ತು! ಆದರೀಗ ಶಿಕ್ಷಣ ವ್ಯವಸ್ಥೆ ಖಾಸಗೀಕರಣಗೊಂಡು ಏನು ಸಾಧಿಸಿದೆ? ಸಮಾಜದ ಯಾವ ಸ್ಥರದ ಮಕ್ಕಳನ್ನು ಪೋಷಿಸುತ್ತಿದೆ? ಎಂಬೆರಡು ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೋದರೆ, ದೇಶದ ಬಹುಪಾಲು ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾದ ಸಾಲು ಸಾಲು ವರದಿಗಳು ಕಣ್ಣಿಗೆ ರಾಚುತ್ತವೆ! ದುಬಾರಿ ಶಿಕ್ಷಣ ವ್ಯವಸ್ಥೆಯಿಂದ ವಂಚಿತರಾಗಿ, ಸಾರ್ವಜನಿಕ ಜನನಿಬಿಡ ಪ್ರದೇಶಗಳಲ್ಲಿ ಕಡಲೆಕಾಯಿ, ಐಸ್ ಕ್ರೀಂ, ಬಲೂನ್ ಮಾರುತ್ತಲೋ ನಿಂತಿರುವ ಚಿತ್ರಗಳು ಒಂದೆಡೆ ಕಂಡರೆ, ಮತ್ತೊಂದೆಡೆ ಸಮಾಜಘಾತಕ ಚಟುವಟಿಕೆಗಳಲ್ಲಿ ನಿರತರಾಗಿರುವ ಸುದ್ದಿಗಳು ಕಿವಿಗಳಿಗೆ ಅಪ್ಪಳಿಸುತ್ತಿವೆ!

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ

ಇನ್ನು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಜಾರಿಯಿಂದ ಬಡ, ಮಧ್ಯಮ ವರ್ಗದ ಮಕ್ಕಳು ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗಿದೆ ಎಂಬುದು ಒಪ್ಪಿತವಾಗಿದ್ದರೂ, ಇದರಿಂದ ಸರಕಾರಿ ಶಾಲೆಗಳ ಮೇಲೆ ಆಗಿರುವ ದುಷ್ಪರಿಣಾಮ ಸಣ್ಣದೇನಲ್ಲ!  ಆರ್‌.ಟಿ.ಇ ನಿಯಮದ ಮೂಲಕ ಖಾಸಗಿ ಶಾಲೆಯಲ್ಲಿ ಸಿಟು ಪಡೆಯುವ ಸಾಧ್ಯತೆ ಇರುವ ಮಕ್ಕಳನ್ನು, ಅವರ ಪೋಷಕರು ಸನಿಹದಲ್ಲೇ ಇರುವ ಸರಕಾರಿ ಶಾಲೆಗೆ  ಕಳಿಸುವ ಉತ್ಸಾಹ ತೋರಿಸುವುದಿಲ್ಲ. ಹೀಗಾಗಿ ಸರಕಾರಿ ಶಾಲೆ ಸೇರಬೇಕಾದ ಮಕ್ಕಳೂ ಇಂದು ಖಾಸಗಿ ಶಾಲೆ ಪಾಲಾಗುತ್ತಿದ್ದಾರೆ. ಮೇಲ್ನೋಟಕ್ಕೆ ಸರಕಾರಿ ಶಾಲೆಗಳ ಅಭಿವೃದ್ಧಿಗೆ  ಪೂರಕ ಎಂಬಂತಿರುವ ಈ ಕಾಯ್ದೆ ಪರೋಕ್ಷವಾಗಿ  ಖಾಸಗಿ ಶಾಲೆಗಳ ಬೆಳವಣಿಗೆಗೆ ಬೆಂಬಲ ನೀಡುತ್ತಿರುವುದನ್ನೂ ಅಲ್ಲಗೆಳೆಯುವಂತಿಲ್ಲ! ಅಲ್ಲಿಗೆ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗಲು ಸರ್ಕಾರವೂ ಕೂಡ ನೇರವಾಗಿ ಕಾರಣವಾದಂತಲ್ಲವೇ? ಇದರ ಬದಲಾಗಿ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಸರ್ಕಾರಿ ಶಾಲೆಗಳ ಮಾದರಿಯಲ್ಲಿ ನಾಡಿನ ಇತರೆ ಸರ್ಕಾರಿ ಶಾಲೆಗಳನ್ನು ಉಳಿಸಿಕೊಂಡು ಹೋಗುವ ಔಚಿತ್ಯದತ್ತ ಸರ್ಕಾರ ಜಾಣಕುರುಡು ವಹಿಸಿರುವುದು ಎಂಥವರಿಗೂ ಅರ್ಥವಾಗುತ್ತದೆ!

ಸಾಮಾಜಿಕ ಬದ್ದತೆ ಮತ್ತು ಎಚ್ಚರಿಕೆಯ ಪ್ರಜ್ಞೆ ಉಳಿಸಿಕೊಂಡು ಬೆಳೆಸಿಕೊಂಡು ಹೊರಟಿರುವ ನಾಡಿನ ಹಲವು ಗ್ರಾಮಗಳ ಹಿರಿಕರು, ತಮ್ಮ ಹಳ್ಳಿಗಾಡಿನ ಸರ್ಕಾರಿ ಶಾಲೆಗಳಿಗೆ ತಾವುಗಳೇ ಪುನಶ್ಚೇತಕರಾಗಿ ನಿಂತುಕೊಂಡಿದ್ದಾರೆ ಎಂಬ ವಿಚಾರವನ್ನು ಎಲ್ಲರೂ ಒಪ್ಪಲೇಬೇಕಿದೆ. ತಮ್ಮ ಊರಿನ ಸರಕಾರಿ ಶಾಲೆಗಳಲ್ಲಿ ಪಾಠ ಹೇಳಲು ಬರುವ ಶಿಕ್ಷಕರಿಗೆ ಬೇಕಿರುವ ಕೆಲವು ಉಪಯುಕ್ತ ಸೌಲಭ್ಯಳನ್ನು ಊರಿನವರೇ ಪೂರೈಸುತ್ತಿದ್ದಾರೆ. ಹಳ್ಳಿಯಿಂದ ಸಿಟಿಗೆ ವಲಸೆ ಹೋಗಿ ಆರ್ಥಿಕವಾಗಿ ಸಬಲರಾದಂತಹ ಕುಟುಂಬಗಳಿಂದ ತಮ್ಮ ಶಾಲೆಗೆ ಬೇಕಿರುವ ಪರಿಕರಗಳನ್ನು ದಾನವಾಗಿಯೂ ಕೂಡ ಹಳ್ಳಿಕಾರರು ಪಡೆದು ಶಾಲೆಯನ್ನು ಉನ್ನತೀಕರಿಸುತ್ತಿದ್ದಾರೆ! ಕೆಲವು ಕಡೆಗಂತೂ ಗ್ರಾಮ ಪಂಚಾಯಿತಿಗೆ ಸಿಗುವ ಅನುದಾನ ಮತ್ತು ರೆವೆನ್ಯೂ ಬಳಸಿಕೊಂಡು ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗಿಂತಲೂ ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಇಂತಹ ಸಾಮುದಾಯಿಕ ಪ್ರಜ್ಞೆಗೆ ಸರ್ಕಾರಿ ಮೊಹರು ಬಿದ್ದರೆ ಸರ್ಕಾರಿ ಶಾಲೆಗಳು, ಮುಚ್ಚುವ ಬದಲಾಗಿ ತಲೆಮಾರಗಳಿಂದ ತಲೆಮಾರುಗಳವರೆಗೆ  ಶಿಕ್ಷಣ ಧಾರೆ ಎರೆಯುತ್ತಲೇ ಸಾಗುತ್ತದೆ ಎಂಬುದು ಸುಳ್ಳಂತೂ ಅಲ್ಲ!

ಪುನಃಶ್ಚೇತನಗೊಳಿಸುವ ಕಾಳಜಿ ಇಲ್ಲ

ಇದೆಲ್ಲ ಗೊತ್ತಿದ್ದರೂ ಸರ್ಕಾರಿ ಸ್ವಾಮ್ಯದ ಶಾಲೆಗಳನ್ನು ಪುನಃಶ್ಚೇತನಗೊಳಿಸುವ ಇರಾದೆಗಳು ಸರ್ಕಾರಗಳಲ್ಲಿ ಕಂಚಿತ್ತೂ ಕಾಣುತ್ತಿಲ್ಲ. ಅದರ ಬದಲಾಗಿ  ಖಾಸಗಿ ಶಾಲೆಗಳ ಆರಂಭಕ್ಕೆ ಮುಕ್ತವಾಗಿ ಅವಕಾಶ ನೀಡುತ್ತಿವೆ. ಇದಕ್ಕಾಗಿ ಸರ್ಕಾರಿ ಶಾಲೆಗಳನ್ನೇ ಮುಚ್ಚಲು ನೂರೆಂಟು ಬಗೆಯ ಆದೇಶಗಳನ್ನು ಜಾರಿಮಾಡಲಾಗುತ್ತಿದೆ!  ಆ ಕಾರಣದಿಂದಲೇ ಇಂದು ಗಲ್ಲಿಗೊಂದರಂತೆ ಖಾಸಗಿ ಶಾಲೆಗಳು ಹುಟ್ಟಿಕೊಂಡು  ಡೊನೇಷನ್‌ ಹೆಸರಲ್ಲಿ ಪೋಷಕರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಅಷ್ಟಲ್ಲದೇ ಯಾವುದೇ ಪಕ್ಷದ ಸರಕಾರ ಅಧಿಕಾರಕ್ಕೆ ಬರಲಿ, ಶಿಕ್ಷಣ ಸಚಿವರ ಸ್ಥಾನವನ್ನು  ಅಲಂಕರಿಸುವುದು ಖಾಸಗಿ ಶಾಲೆಗಳ ಮಾಲೀಕರೇ ಎಂಬುದು ಗುಟ್ಟಿನ ವಿಷಯವಲ್ಲ! ಇದಕ್ಕೆ ಈಗಿನ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ‌ ಕೂಡ ಹೊರತಾಗಿಲ್ಲ! ಹೀಗೆ ಶಿಕ್ಷಣ ಸಚಿವರ ಸ್ಥಾನಕ್ಕೆ ಬಂದೆರಗುವ ಖಾಸಗಿ ಶಿಕ್ಷಣ ಸಂಸ್ಥೆಯ ಮಾಲೀಕರು, ಯಾವ ದೃಷ್ಟಿಕೋನದಲ್ಲಿ ಸರಕಾರಿ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಪೂರಕವಾಗಿ ನಿಲ್ಲಬಲ್ಲರು? ಇಂತಹ ನೂರೆಂಟು ಆತಂಕ ಮತ್ತು ಸಂಘರ್ಷಗಳ ನಡುವೆ ತೊಳಲಾಡುತ್ತಿರುವ ನಾಡಿನ

7000 ಸರ್ಕಾರಿ ಶಾಲೆಗಳ ನೆತ್ತಿಯ ಮೇಲೀಗ ಮುಚ್ಚುವ ದೂಗುಗತ್ತಿ ನೇತಾಡುತ್ತಿದೆ! ಹಾಗೆಯೇ  ಈ ಶಾಲೆಗಳಲ್ಲಿ ವಿಧ್ಯಾಭ್ಯಾಸ ಮಾಡಿ  ದೇಶದ ಅತ್ಯುನ್ನತ ಹುದ್ದೆಗಳನ್ನು, ಬಿರುದು ಸಮ್ಮಾನಗಳನ್ನು ತಮ್ಮದಾಗಿಸಿಕೊಂಡಿರುವ ಮಹನಿಯರ ಇತಿಹಾಸವೂ ಕೂಡ ಈ ಶಾಲೆಗಳ ಮುಚ್ಚುವ ಪ್ರಕ್ರಿಯೆಯೊಟ್ಟಿಗೆ ಚರಿತ್ರೆಯ ಪುಟಗಳಿಂದಲೂ ಅಳಿಸಲ್ಪಡುವುದು ಕೂಡ ಗ್ಯಾರಂಟಿ ಅಲ್ಲದೇ ಮತ್ತೇನೂ ಅಲ್ಲ!

ಹೀಗೆ ಇಂಥವೆಲ್ಲ ಚರ್ಚೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದು ಇತ್ತಿಚೆಗೆ ಚನ್ನಪಟ್ಟನ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಹೊರಡಿಸಿರುವ ಆದೇಶ ಎಂಬುದು ಗುಟ್ಟಿನ ಸಂಗತಿಯಲ್ಲ! ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಹೊಂಗನೂರಿನ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯನ್ನು ಒಟ್ಟುಗೂಡಿಸಿ ‘ಕರ್ನಾಟಕ ಪಬ್ಲಿಕ್‌ ಶಾಲೆ’ಯಾಗಿ ಪರಿವರ್ತಿಸಲು ಅನುಮತಿ ನೀಡಿರುವ ಶಿಕ್ಷಣ ಇಲಾಖೆ ಈ ಶಾಲೆಯ ಸುತ್ತಲ 6 ಕಿ.ಮೀ. ವ್ಯಾಪ್ತಿಯ 7 ಪ್ರಾಥಮಿಕ ಶಾಲೆಗಳನ್ನು ವಿಲೀನಗೊಳಿಸಲು ತಾತ್ವಿಕ ಒಪ್ಪಿಗೆ ಕೂಡ ನೀಡಿದೆ.

ಅದರಂತೆ  ಗ್ರಾಮ ಪಂಚಾಯಿತಿಗೆ ಒಂದರಂತೆ ಇಂತ 700 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು 2026-27ನೇ ಸಾಲಿನಲ್ಲಿ ಹೊಸದಾಗಿ ಆರಂಭಿಸಲು ಈಗಾಗಲೇ ಸರ್ಕಾರ ಅನುಮತಿ ನೀಡಿಯೂ ಆಗಿದೆ! ಇಂತಹ  ಒಂದೊಂದು ಕೆ.ಪಿ.ಎಸ್‌ ಶಾಲೆಗಳಿಗೂ ಸುತ್ತಮುತ್ತಲ ಐದಾರು ಕಿ.ಮೀ. ವ್ಯಾಪ್ತಿಯ ಕನಿಷ್ಠ 5ರಿಂದ ಗರಿಷ್ಠ 10 ಶಾಲೆಗಳ ವಿಲೀನಕ್ಕೆ ಸದ್ದಿಲ್ಲದೆ ಈಗಾಗಲೇ ಪ್ರಕ್ರಿಯೆಗಳು ಆರಂಭಗೊಂಡಿವೆ!  ಇದರಿಂದ ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಕನಿಷ್ಠ 5 ಸಾವಿರದಿಂದ ಗರಿಷ್ಠ 7 ಸಾವಿರದಷ್ಟು ಸರ್ಕಾರಿ ಶಾಲೆಗಳು, ಬಹುನಿರೀಕ್ಷಿತ  ಕೆ.ಪಿ.ಎಸ್‌  ಶಾಲೆಗಳಲ್ಲಿ ವಿಲೀನವಾಗುವ ಮೂಲಕ ಶಾಶ್ವತವಾಗಿ ಮುಚ್ಚಿಹೋಗಲು ಸಮಯ ನೂಕುತ್ತಿರುವುದು ಶಿಕ್ಷಣ ಸಚಿವ ಮಧು ಬಂಗಾರಪ್ಪನಿಗೆ ಗೊತ್ತಿಲ್ಲವೆಂದಲ್ಲ! ಇದಕ್ಕೆ ಶಿಕ್ಷಣ ಇಲಾಖೆ ನೀಡುತ್ತಿರುವ ಸಬೂಬು ಕೇಳಿದರೆ ರಾಜ್ಯಕ್ಕೆ ರಾಜ್ಯವೇ ಬೆಚ್ಚಿ ಬೀಳುತ್ತದೆ!

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದರಿಂದ ಎಲ್ಲ ಶಾಲೆಗಳಿಗೂ ಅಗತ್ಯ ಶಿಕ್ಷಕರು, ಕಟ್ಟಡ, ಮೂಲಸೌಲಭ್ಯ ಒದಗಿಸಲು ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕೆ ಗ್ರಾಮ ಪಂಚಾಯಿತಿಗೆ ಒಂದು ಎಂಬಂತೆ  ಕರ್ನಾಟಕ ಪಬ್ಲಿಕ್‌ ಶಾಲೆ ಆರಂಭಿಸಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಷರಾ ಬರೆದಿದೆ! ಹೊಸ ಪಬ್ಲಿಕ್ ಶಾಲೆಯಲ್ಲಿ   ಎಲ್‌.ಕೆ.ಜಿ ಯಿಂದ 12ನೇ ತರಗತಿ ವರೆಗೂ ಒಂದೇ ಕಡೆ ಶಿಕ್ಷಣ ಒದಗಿಸಲು ಉದ್ದೇಶಿಸಲಾಗಿದೆ. ಅದರಂತೆ ಪ್ರತಿ ಕೆ.ಪಿ.ಎಸ್‌ ಶಾಲೆಗೂ ಸುತ್ತಮುತ್ತಲ ಐದರಿಂದ ಹತ್ತು ಶಾಲೆಗಳನ್ನು ವಿಲೀನಗೊಳಿಸಲು ಇಲಾಖೆ ನಿರ್ಧರಿಸಿಯೂ ಆಗಿದೆ. ಅದರಂತೆ ಈಗಾಗಲೇ ರಾಜ್ಯದಲ್ಲಿ 307 ಕೆಪಿಎಸ್‌ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಶಾಲೆಗಳಿಗೆ ಈಗಾಗಲೇ ಸಾವಿರಾರು ಶಾಲೆಗಳನ್ನು ಸರ್ಕಾರ ವಿಲೀನಗೊಳಿಸಿಕೊಂಡೂ ಆಗಿದೆ!  ಇದೀಗ ಇತ್ತೀಚೆಗೆ ಶಿಕ್ಷಣ ಇಲಾಖೆಯೇ ಹೊರಡಿಸಿರುವ ಆದೇಶದಲ್ಲಿ 2026-27ನೇ ಸಾಲಿನಿಂದ ರಾಜ್ಯದಲ್ಲಿ ಹೊಸದಾಗಿ 700 ಕೆಪಿಎಸ್‌ ಶಾಲೆಗಳನ್ನು (ಕಲ್ಯಾಣ ಕರ್ನಾಟದಲ್ಲಿ 200 ಕೆಪಿಎಸ್‌ ಸೇರಿ) ಆರಂಭಿಸಲು ಅನುಮೋದನೆ ನೀಡಿದೆ. ಇಲಾಖಾ ಮೂಲಗಳು ಧೃಡಿಕರಿಸುವಂತೆ,  ಪ್ರತಿಯೊಂದು ಕೆಪಿಎಸ್‌ ಶಾಲೆಗೂ ಸುತ್ತಮುತ್ತಲ ಐದರಿಂದ ಹತ್ತು ಶಾಲೆಗಳನ್ನು ವಿಲೀನ ಮಾಡಲಾಗುತ್ತದೆ. ಶಾಲೆಗಳ ವಿಲೀನ ಪ್ರಕ್ರಿಯೆಯ ಹೊಣೆಯನ್ನು ಜಿಲ್ಲಾ ಡಿ.ಡಿ.ಪಿ ಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹೆಗಲಿಗೆ ಕೊಟ್ಟು ಸರ್ಕಾರ ಮುಗುಮ್ಮಾಗಿದೆ!

60 ಸಾವಿರ ಶಿಕ್ಷಕರ ಕೊರತೆ

ಇದರಿಂದಾಗಿ ಸಧ್ಯಕ್ಕೆ  7000 ಸರ್ಕಾರಿ ಶಾಲೆಗಳು ಮುಚ್ಚಿದರೆ, ಮುಂದೆ 25000 ಸರ್ಕಾರಿ ಶಾಲೆಗಳು ಮುಚ್ಚಿ ಹೋಗುವ ದೊಡ್ಡ ಅಪಾಯವನ್ನೂ ನಮ್ಮ ನಿಮ್ಮೆಲ್ಲರ ಮುಂದೆ ತೆರೆದಿಟ್ಟಿರುವುದು ಕಾಕತಾಳೀಯವಂತೂ ಅಲ್ಲ!  ಶಿಕ್ಷಣ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ ಸುಮಾರು 10ಕ್ಕಿಂತ ಕಡಿಮೆ ಮಕ್ಕಳಿರುವ 5,000 ಶಾಲೆಗಳೂ ಸೇರಿ 50ಕ್ಕಿಂತ ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಗಳ ಸಂಖ್ಯೆ 25 ಸಾವಿರಕ್ಕೂ ಹೆಚ್ಚಿವೆ. ಪ್ರತಿ ವರ್ಷ ಗ್ರಾಮ ಪಂಚಾಯಿತಿಗೆ ಒಂದರಂತೆ ಹಂತ ಹಂತವಾಗಿ ಒಂದಷ್ಟು ಕೆ.ಪಿ.ಎಸ್‌ ಶಾಲೆಗಳನ್ನು ಆರಂಭಿಸಿದರೆ,  ಕಡಿಮೆ ಮಕ್ಕಳಿರುವ ಶಾಲೆಗಳನ್ನು ಆ ಶಾಲೆಗಳಲ್ಲಿ ವಿಲೀನ ಮಾಡುವುದು ಕಡ್ಡಾಯವಾಗುತ್ತದೆ. ಅದರೊಂದಿಗೆ ಈಗಾಗಲೇ ರಾಜ್ಯದ 46 ಸಾವಿರ ಸರ್ಕಾರಿ ಶಾಲೆಗಳಲ್ಲಿ ಒಟ್ಟಾರೆ 15 ವರ್ಷಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಶೇ.30ರಷ್ಟು ಕುಸಿದಿದೆ. ಇದರ ನಡುವೆ ನಾಡಿನ ಸರ್ಕಾರಿ ಶಾಲೆಗಳು  60 ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆ ಎದುರಿಸುತ್ತಿವೆ. ಪ್ರತೀ ವರ್ಷ 6 ಸಾವಿರ ಶಿಕ್ಷಕರು ನಿವೃತ್ತರಾಗುತ್ತಿದ್ದಾರೆ. ಆದರೆ, ಅಧಿಕಾರಕ್ಕೆ ಬಂದ ಸರ್ಕಾರಗಳು ಖಾಲಿ ಹುದ್ದೆ ಭರ್ತಿ ಮಾಡುವ ಗೋಜಿಗೇ ಹೋಗುತ್ತಿಲ್ಲ. ಮಕ್ಕಳು ಎಷ್ಟೇ ಇದ್ದರೂ ಕಾನೂನಾತ್ಮಕವಾಗಿ ಆ ಎಲ್ಲಾ ಶಾಲೆಗಳಿಗೂ ಕನಿಷ್ಠ ವಿಷಯಕ್ಕೊಬ್ಬ ಶಿಕ್ಷಕರನ್ನು ನೇಮಿಸಬೇಕು!  ಇಂತಹ ಕಾರಣಗಳನ್ನು ಮುಂದು ಮಾಡಿ ಕೆ.ಪಿ.ಎಸ್ ಶಾಲೆಗಳನ್ನು ಮತ್ತಷ್ಟು ತೆರೆಯಲು ಸರ್ಕಾರ ಮುಂದಾದರೇ, ಭವಿಷ್ಯತ್ತಿನ ಹತ್ತು ವರ್ಷಗಳ ಅವಧಿಯಲ್ಲಿ ಕನಿಷ್ಟ 25000 ಸರ್ಕಾರಿ ಶಾಲೆಗಳು ಯಾರ ಪ್ರತಿರೋಧವಿಲ್ಲದೆಯೇ ಮುಚ್ಚಲ್ಪಡುವುದು ಖಾತ್ರಿ!

ಇದೆಲ್ಲನ್ನು ಮುಖ್ಯಮಂತ್ರಿ‌ ಸಿದ್ದರಾಮಯ್ಯ ಗಮನಿಸುತ್ತಿದ್ದಾರೋ? ಇಲ್ಲವೋ? ನಿಖರವಾದ ವರ್ತಮಾನ ಲಭ್ಯವಾಗುತ್ತಿಲ್ಲ! ಆದರೆ ಶಿಕ್ಷಣ ಮಂತ್ರಿ  ಮಧು ಬಂಗಾರಪ್ಪ ಮಾತ್ರ, ಗ್ರಾಮೀಣ ಕೃಪಾಂಕ ಕೊಟ್ಟು ಲಕ್ಷಾಂತರ ಬದುಕುಗಳ ಬದುಕಿಗೆ ಆಸರೆಯಾಗಿ ನಿಂತ ಸಾರೆಕೊಪ್ಪದ ಸರದಾರ  ಬಂಗಾರಪ್ಪರ ಇತಿಹಾಸಕ್ಕೆ ಕಪ್ಪು ಚುಕ್ಕೆ ಇಡುವಂತೆ ಸರ್ಕಾರಿ ಶಾಲೆಗಳನ್ನು ಮುಚ್ಚುವಲ್ಲಿ ವಿಶೇಷ ಆಸಕ್ತಿ ವಹಿಸಿರುವುದು ನಾಡಿನ ದುರಂತವಲ್ಲದೇ ಮತ್ತೇನಲ್ಲ!

ಇರ್ಫಾನ್ ಮುದಗಲ್

Share

Leave a comment

Leave a Reply

Your email address will not be published. Required fields are marked *

Related Articles
darmastala yojane
Homeರಾಜಕೀಯವಿಶೇಷ ವರದಿಗಳು

ದೇವರ ತಿಮ್ಲಾಪುರದಲ್ಲಿ ನಡೆದ ಮದ್ಯವರ್ಜನ ಶಿಬಿರದ ಮಾಹಿತಿ ಇಲ್ಲಿದೆ

ಹರಪನಹಳ್ಳಿ :  "ಇದು ಕೇವಲ ಶಿಬಿರವಲ್ಲ, ಕುಟುಂಬಗಳನ್ನು ಕಟ್ಟುವ ಹಾಗೂ ಹೆಣ್ಣುಮಕ್ಕಳ ಕಣ್ಣೀರು ಒರೆಸುವ ಪವಿತ್ರ ಕಾರ್ಯ. ಅಂಧಕಾರದಲ್ಲಿದ್ದ ಬಾಳಿಗೆ ಬೆಳಕು ನೀಡುವ ಈ ಕಾರ್ಯ ಸಮಾಜಕ್ಕೆ ಮಾದರಿ ಎಂದು ನೀಲಗುಂದ ಗುಡ್ಡದ ವಿರಕ್ತಮಠದ ಚೆನ್ನಬಸವ ಶಿವಯೋಗಿ ಸ್ವಾಮೀಜಿ ತಿಳಿಸಿದರು. ನಗರದ ಹೊರವಲಯದ ದೇವರ ತಿಮ್ಮಾಲಪುರ ಗ್ರಾಮದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ '2060ನೇ ಮದ್ಯವರ್ಜನ ಶಿಬಿರ' ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.ಸಂಸಾರದಲ್ಲಿ ಸರಸ, ವಿರಸಗಳು ಬಂದು...

 ತಿಪ್ಪೆಹಳ್ಳಿ :  ‘ಮ್ಯಾಸ ನಾಯಕರ ಚಿನ್ನಹಗರಿ ಉತ್ಸವ'  ಜ.15ಕ್ಕೆ ನಿಗಧಿ
ವಿಶೇಷ ವರದಿಗಳು

 ತಿಪ್ಪೆಹಳ್ಳಿ :  ‘ಮ್ಯಾಸ ನಾಯಕರ ಚಿನ್ನಹಗರಿ ಉತ್ಸವ’  ಜ.15ಕ್ಕೆ ನಿಗಧಿ

ಹರಪನಹಳ್ಳಿ : ಕೂಡ್ಲಿಗಿ ತಾಲ್ಲೂಕು ಪೂಜಾರಹಳ್ಳಿ ಪಂಚಾಯಿತಿ ವ್ಯಾಪ್ತಿಯ ತಿಪ್ಪೆಹಳ್ಳಿ ಹತ್ತಿರ ಹರಿಯುವ ಚಿನ್ನಹಗರಿ ನದಿ...

ಡಾ.ಅಂಜಲಿ ನಿಂಬಾಳ್ಕರ
ವಿಶೇಷ ವರದಿಗಳು

ಡಾ.ಅಂಜಲಿ ನಿಂಬಾಳ್ಕರ ಯಾರು ಗೊತ್ತೆ ?

ಗೋವಾ-ಹೊಸದಿಲ್ಲಿ ನಡುವಿನ ವಿಮಾನ ಪ್ರಯಾಣದ ವೇಳೆ ಖಾನಾಪುರದ ಮಾಜಿ ಶಾಸಕಿಯಾದ ಡಾ.ಅಂಜಲಿ ನಿಂಬಾಳ್ಕರ್ ಅವರು ಅಮೇರಿಕಾದ...

imran-khan-killed-in-jail-south-asia-is-shaking sirisuddi news 1
ವಿಶೇಷ ವರದಿಗಳು

Words ಟಾಕ್ : ಇಮ್ರಾನ್ ಖಾನ್ ಜೈಲಿನಲ್ಲೇ ಹತ್ಯೆ? ದಕ್ಷಿಣ ಏಷಿಯಾ ಕಂಪಿಸುತ್ತಿದೆ !

ಪಾಕ್ ಜೈಲಲ್ಲಿ ಹತ್ಯೆ ಆದರಾ ಇಮ್ರಾನ್ ಖಾನ್ ; ಹತ್ಯೆಯ ಹಿಂದಿದೆಯಾ ಅಮೆರಿಕ ?: ಇಂಥದ್ದೊಂದು ಸುದ್ದಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.