ಹರಪನಹಳ್ಳಿ : ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವುದನ್ನು ವಿರೋಧಿಸುತ್ತಿದ್ದೇವೆ ಇಲಾಖೆಯ ಎಲ್ಲಾ ನೌಕರರು ಹಾಗೂ ಸಿಬ್ಬಂದಿ ವರ್ಗ ಒಕ್ಕೂರಲಿನಿಂದ ಈಗ ಸಾಂಕೇತಿಕವಾಗಿ ಪ್ರತಿಭಟನೆ ಮೂಲಕ ಮನವಿ ಮಾಡುತ್ತಿದ್ದೇವೆ ಎಂದು ಪಟ್ಟಣದ ಬೆಸ್ಕಾಂ ಎಇ ಮಾರುತೇಶ ಕೆ. ಹೇಳಿದರು.
ನಗರದ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಕ ಅಭಿಯಂತರ (ವಿ) ಕಛೇರಿ ಮುಂದೆ ಗುರುವಾರ ಎಲ್ಲಾ ಸಿಬ್ಬಂದಿ ಹಾಗೂ ನೌಕರರ ಸಂಘದ ಕಾರ್ಯಕರ್ತರು ಭಾಗವಹಿಸಿ ವಿದ್ಯುತ್ ವಿತರಣಾ ಚಟುವಟಿಕೆಗಳ ಪರವಾನಿಗೆಯನ್ನು ಖಾಸಗಿ ಕಂಪನಿಗೆ ನೀಡಬಾರದು ಎಂದು ಆಗ್ರಹಿಸಿದರು. ಮುಂದಿನ ದಿನಗಳಲ್ಲಿ ಸರಕಾರದ ಅಧೀನದಲ್ಲಿರುವ ವಿದ್ಯುತ್ ವಿತರಣಾ ಕ್ಷೇತ್ರವನ್ನು ಟಾಟಾ ಪವರ್ ಕಂಪನಿಗೆ ನೀಡುವ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.
ಅಲ್ಲದೇ ಅಕ್ಷೇಪಣೆಯನ್ನೂ ಅಹ್ವಾನಿಸಲಾಗಿದೆ. ಖಾಸಗಿಕರಣದಿಂದ ಗ್ರಾಹಕರಿಗೆ ವಿದ್ಯುತ್ ವಿತರಣೆ, ದರ, ನಿರ್ವಹಣೆ ಎಲ್ಲದರ ಮೇಲೂ ತೀವ್ರ ತರಹದ ಹೊರೆ ಹಾಗೂ ಒತ್ತಡಗಳು ಬೀಳಲಿವೆ. ಸರಕಾರದ ಅಧೀನದಲ್ಲಿ ಕೆಲಸ ಮಾಡುತ್ತಿರುವ ನಾವು ಹೆಚ್ಚಿನ ರೀತಿಯಲ್ಲಿ ಮುತುವರ್ಜಿವಹಿಸಿ ಇಲಾಖೆಗೆ ನಷ್ಟದ ಪ್ರಮಾಣವನ್ನು ತಗ್ಗಿಸಲು ಶ್ರಮಿಸಬೇಕಿದೆ. ಗ್ರಾಹಕರೊಂದಿಗೆ ಉತ್ತಮ ಬಾಂದವ್ಯ ಸಾಧಿಸಬೇಕು. ಹೀಗಾಗಿ ಈ ಕೂಡಲೇ ಎಲ್ಲಾ ಸಿಬ್ಬಂದಿ ವರ್ಗ ಹಾಗೂ ಗ್ರಾಹಕರು ಆಕ್ಷೇಪಣೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಸಬೇಕು ಎಂದರು.
ಜೆ.ಇ ಕೊಟ್ರಪ್ಪ ಕೆ. ಮಾತನಾಡಿ, ವಿದ್ಯುತ್ ಕ್ಷೇತ್ರ ಶೇ.೫೦ಕ್ಕೂ ಹೆಚ್ಚು ಖಾಸಗಿಕರಣಕ್ಕೆ ತುತ್ತಾಗುತ್ತಿದೆ. ವಿದ್ಯುತ್ ಉತ್ಪಾದನೆ, ನಿರ್ವಹಣೆ, ಕಂಭಗಳ ನಿರ್ಮಾಣ ಹೀಗೆ ಎಲ್ಲಾ ಕ್ಷೇತ್ರಗಳು ಸರಕಾರದ ಒಡೆತನದಲ್ಲಿ ಸಾಗುತ್ತಿದ್ದ ಕಾಲವಿತ್ತು. ನಂತರ ಎಂಎಸ್‌ಇಬಿ, ಕೆಇಬಿ, ಕೆಪಿಟಿಸಿಎಲ್, ಬೆಸ್ಕಾಂಗಳಾಗಿ ಪ್ರತಿಯೊಂದು ವಿಂಗಡಣೆಯಾಗಿ ಹೋಗಿವೆ. ಈಗ ಖಾಸಗಿ ಟಾಟಾದವರ ಪಾಲಿಗೆ ವಿದ್ಯುತ್ ಕ್ಷೇತ್ರ ಕೊಟ್ಟರೆ ಸಿಬ್ಬಂದಿಗಳು ಅವರ ಕುಟುಂಬ ವರ್ಗ ಗುತ್ತಿಗೆದಾರರು ಎಲ್ಲರ ಜೀವನಕ್ಕೆ ಟಾ ಟಾ ವಾಗುತ್ತದೆ. ಈ ಕೂಡಲೇ ಎಲ್ಲರೂ ಒಟ್ಟಾಗಿ ಈ ವಿದ್ಯುತ್ ಖಾಸಗಿಕರಣವನ್ನು ವಿರೋಧಿಸಬೇಕು ಎಂದರು.
ನೌಕರರ ಸಂಘದ ಅಧ್ಯಕ್ಷ ವೀರಣ ಎಂ. ಮಾತನಾಡಿ, ವಿಮಾನ ನಿಲ್ದಾಣಗಳು, ರೈಲು, ಶಿಕ್ಷಣ, ಸಂಚಾರ ಹೀಗೆ ಎಲ್ಲಾ ಕ್ಷೇತ್ರಗಳು ಖಾಸಗಿಕರಣವಾದರೆ ಸೇವಾ ಮನೋಭಾವ ಎಲ್ಲಿ ಉಳಿಯುತ್ತದೆ. ದೀನ ದಲಿತ ಬಡವರಿಗೆ ದೊರಕುತ್ತಿರುವ ಭಾಗ್ಯಗಳ ಯೋಜನೆಗಳಾದ ಗಂಗಾ ಕಲ್ಯಾಣ, ಗೃಹ ಜ್ಯೋತಿ ಯೋಜನೆಗಳಿಗೆ ಸಂಚಕಾರ ಒದಗಲಿದೆ. ರೈತರ ಕೊಳವೆ ಬಾವಿಗಳಿಗೂ ವಿದ್ಯುತ್ ಸಿಗದ ಪರಿಸ್ಥಿತಿ ಎದುರಾಗುತ್ತದೆ. ಖಾಸಗಿ ವಲಯಗಳು ಲಾಭದ ದೃಷ್ಠಿಯಿಂದ ಮಾತ್ರ ವಿದ್ಯುತ್ ಕ್ಷೇತ್ರವನ್ನು ಕಬಳಿಸಲು ಹೊಂಚು ಹಾಕುತ್ತಿದೆ.
ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನಗಳಲ್ಲಿ ವಿದ್ಯುತ್ ದುಬಾರಿಯಾಗಿ ಎಲ್ಲರಿಗೂ ಹೊರೆಯಾಗುತ್ತದೆ ಎಂದರು. ಹರಪನಹಳ್ಳಿಯ ಎಇಇ ಪ್ರಕಾಶ ಪತ್ತೆನೂರು, ಎಇ ಬಸವರಾಜ ಕೆ.ಎಂ., ಎಇ ಇಂದಿರಾ ಎಸ್., ಜೆಇ ವಿನಾಯಕ ಸೇರಿಂದತೆ ಬೆಸ್ಕಾಂ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.ಹರಪನಹಳ್ಳಿ ನಗರದ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಕ ಅಭಿಯಂತರ (ವಿ) ಕಛೇರಿ ಮುಂದೆ ಇಲಾಖೆಯ ಸಿಬ್ಬಂದಿ ಹಾಗೂ ನೌಕರರ ಸಂಘದ ಕಾರ್ಯಕರ್ತರು ಖಾಸಗೀಕರಣವನ್ನು ವಿರೋಧಿಸಿದರು.
Leave a comment