ದಾವಣಗೆರೆ : ಯುವಜನರು ಮತ್ತು ವಿದ್ಯಾರ್ಥಿಗಳು ದೈನಂದಿನ ಜೀವನದಲ್ಲಿ ಸೈಕಲ್ ಬಳಕೆಯನ್ನು ಹೆಚ್ಚಿಸಬೇಕು ಎಂದು ದಾವಣಗೆರೆ ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠಲ್ ಅವರು ಕರೆ ನೀಡಿದ್ದಾರೆ.
‘ವಿಶ್ವ ಸೈಕಲ್ ದಿನಾಚರಣೆ’ಯ ಪ್ರಯುಕ್ತ ದಾವಣಗೆರೆಯಲ್ಲಿ ಆಯೋಜಿಸಲಾಗಿದ್ದ ಅರ್ಥಪೂರ್ಣ ‘ಸೈಕಲ್ ಜಾತಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಪ್ರತಿನಿತ್ಯ 11 ಕಿ.ಮೀ ಸೈಕಲ್ ತುಳಿಯುತ್ತಿದ್ದ ದಿನಗಳನ್ನು ಈ ವೇಳೆ ಅವರು ಹಂಚಿಕೊಂಡರು.
ಹಿರಿಯ ಪತ್ರಕರ್ತ ಡಾ. ಎಚ್. ಬಿ. ಮಂಜುನಾಥ್ ಮಾತನಾಡಿ, ಸೈಕಲ್ ತುಳಿಯುವುದರಿಂದ ನಮ್ಮ ದೈಹಿಕ ಆರೋಗ್ಯ ಸುಧಾರಿಸುವುದಲ್ಲದೆ, ವಾಯು ಮತ್ತು ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಬರುತ್ತದೆ. ನಮ್ಮ ದೇಶದಲ್ಲಿ ವಾರ್ಷಿಕ 245 ಮಿಲಿಯನ್ ಮೆಟ್ರಿಕ್ ಟನ್ ಹಾಗೂ ನಿತ್ಯ 6 ಕೋಟಿ ಬ್ಯಾರಲ್ ಪೆಟ್ರೋಲಿಯಂ ಖರ್ಚಾಗುತ್ತಿದ್ದು, ಇದರಲ್ಲಿ ಶೇ.62 ರಷ್ಟು ಕೇವಲ ದ್ವಿಚಕ್ರ ವಾಹನಗಳಿಗೇ ಬಳಕೆಯಾಗುತ್ತಿದೆ ಎಂದರು.
ವಾರದಲ್ಲಿ ಕೇವಲ ಒಂದು ದಿನ ಬೈಕ್ ಅಥವಾ ಸ್ಕೂಟರ್ ಬದಲು ಸೈಕಲ್ ಬಳಸಿದರೆ ವಾರ್ಷಿಕ 320 ಕೋಟಿ ಬ್ಯಾರಲ್ ಪೆಟ್ರೋಲ್ ಉಳಿಸಬಹುದು. ಸೈಕಲ್ ತುಳಿಯುವುದರಿಂದ ಸಮಯ ವ್ಯರ್ಥವಾಗುತ್ತದೆ ಎಂಬುದು ತಪ್ಪು ಕಲ್ಪನೆ, ಬದಲಾಗಿ ಇದು ಸಮಯದ ಸದ್ಬಳಕೆಯ ಅರಿವು ಮೂಡಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಾವಣಗೆರೆ ಬೈಸಿಕಲ್ ಕ್ಲಬ್ ಹಾಗೂ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿಯ ಸಂಯುಕ್ತ ಆಶ್ರಯದಲ್ಲಿ ಈ ಜಾತಾ ನಡೆಯಿತು.
ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ರೇಣುಕಾ ದೇವಿ, ಗ್ರಾಹಕ ಕೋರ್ಟ್ನ ಮಾಜಿ ನ್ಯಾಯಾಧೀಶ ಶಿವಕುಮಾರ್, ದಾವಣಗೆರೆ ಬೈಸಿಕಲ್ ಕ್ಲಬ್ ಕಾರ್ಯದರ್ಶಿ ಕೆ. ಮಹೇಶ್, ಎನ್.ಕೆ. ಕೊಟ್ರೇಶ್, ಕಿರಣ್ ಬಾಳೆಹೊಲದ, ಪ್ರಸಾದ್, ಚಂದ್ರಮೌಳಿ, ಮಧುಸೂದನ್, ಚನ್ನಬಸವ ಶೀಲವಂತ್, ಬ್ರಿಜೇಶ್, ಪರೀಕ್ಷಿತ್ ಸೇರಿದಂತೆ ಹಲವು ಪ್ರಮುಖರು ಹಾಗೂ ಕ್ರೀಡಾ ಇಲಾಖೆ ಸಿಬ್ಬಂದಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
Leave a comment