ಹಂಪಿ ಆಕಾಶದಲ್ಲಿ ಅದ್ಭುತ ಲೋಕ : ಡ್ರೋನ್ ಶೋ ಮೂಲಕ  ವಿಜಯನಗರ ವೈಭವ

Sirisuddi Kannada
1 Min Read

ವಿಜಯನಗರ (ಹಂಪಿ)  : 
ಹಂಪಿ ಉತ್ಸವದ ಉದ್ಘಾಟನಾ ಸಮಾರಂಭದ ಅಂಗವಾಗಿ ಆಯೋಜಿಸಲಾಗಿದ್ದ ಅತ್ಯಾಧುನಿಕ ಡ್ರೋನ್ ಶೋ, ವಿಜಯನಗರದ ಗತವೈಭವವನ್ನು ಬಾನಂಗಳದಲ್ಲಿ ಅನಾವರಣಗೊಳಿಸಿತು. ಆಧುನಿಕ ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಪರಂಪರೆಯ ಈ ಅಪೂರ್ವ ಸಂಗಮವು ನೆರೆದಿದ್ದ ಸಹಸ್ರಾರು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ನೂರಾರು ಡ್ರೋನ್‌ಗಳು ಆಕಾಶದಲ್ಲಿ ಹಂಪಿಯ ಪ್ರಸಿದ್ಧ ಕಲ್ಲಿನ ರಥ, ಭವ್ಯವಾದ ವಿರೂಪಾಕ್ಷ ದೇವಾಲಯ ಮತ್ತು ರೌದ್ರಾವತಾರದಲ್ಲಿರುವ ಉಗ್ರ ನರಸಿಂಹನ ಮೂರ್ತಿಗಳನ್ನು ಕಲಾತ್ಮಕವಾಗಿ ಬಿಂಬಿಸಿದವು. ವಿಜಯನಗರ ಸಾಮ್ರಾಜ್ಯವನ್ನು ಜಗತ್ತಿಗೆ ಪರಿಚಯಿಸಿದ ಅಪ್ರತಿಮ ವೀರ, ಕನ್ನಡಿಗರ ಹೆಮ್ಮೆಯ ಸಾಮ್ರಾಟ ಶ್ರೀ ಕೃಷ್ಣದೇವರಾಯರ ಭಾವಚಿತ್ರವು ಆಕಾಶದಲ್ಲಿ ಮೂಡಿಬಂದಾಗ ಜನರಿಂದ ಹರ್ಷೋದ್ಗಾರ ವ್ಯಕ್ತವಾಯಿತು. ಇದರೊಂದಿಗೆ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿರುವ ಹಂಪಿಯ ದರೋಜಿ ಕರಡಿ ಧಾಮ ಮತ್ತು ಬಡವಿ ಲಿಂಗದ ಚಿತ್ರಣಗಳು ಪ್ರದರ್ಶನದ ಮೆರುಗನ್ನು ಹೆಚ್ಚಿಸಿದವು.

               

ಪ್ರದರ್ಶನವು ಕೇವಲ ಇತಿಹಾಸಕ್ಕೆ ಸೀಮಿತವಾಗದೆ, ರಾಜ್ಯ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳಾದ ಶಕ್ತಿ ಮತ್ತು ಅನ್ನಭಾಗ್ಯ ಸೇರಿದಂತೆ ಪಂಚ ಯೋಜನೆಗಳ ಕುರಿತು ಮಾಹಿತಿಯನ್ನು ಸ್ಫುಟವಾಗಿ ಪ್ರದರ್ಶಿಸಿತು. ಕೊನೆಯಲ್ಲಿ ಬಡವರ ಮತ್ತು ಕಲಾವಿದರ ಆಶಾಕಿರಣವೆಂದು ಬಣ್ಣಿಸಲಾದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಭಾವಚಿತ್ರವನ್ನು ಡ್ರೋನ್ ಮೂಲಕ ಬಾನಂಗಳದಲ್ಲಿ ಚಿತ್ರಿಸಿ ಗೌರವ ಸಲ್ಲಿಸಲಾಯಿತು.

ಇದರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಹೆಚ್.ಕೆ.ಪಾಟೀಲ್, ಸಚಿವ ಶಿವರಾಜ ತಂಗಡಿ, ಬಿ.ಝಡ್.ಜಮೀರ್ ಅಹಮ್ಮದ್ ಖಾನ್, ಶಾಸಕ ಹೆಚ್.ಆರ್.ಗವಿಯಪ್ಪ, ನಟ ದಿವಂಗತ ಪುನೀತ್‌ರಾಜ್ ಕುಮಾರ್ ಚಿತ್ರಗಳು ಡ್ರೋನ್ ಸಂಯೋಜನೆಯಲ್ಲಿ ಮೂಡಿಬಂದವು. ಈ ವರ್ಣರಂಜಿತ ಡ್ರೋನ್ ಶೋ ಪ್ರದರ್ಶನವು ಹಂಪಿಯ ಸಾಂಸ್ಕೃತಿಕ ಹಿರಿಮೆಗೆ ಹೊಸ ಆಯಾಮವನ್ನು ನೀಡುವಲ್ಲಿ ಯಶಸ್ವಿಯಾಯಿತು. ಎ.ಐ.ಆರ್. ಪಿಕ್ಸಲ್ ಕಂಪನಿಯ ತಂತ್ರಜ್ಞರು ಡ್ರೋನ್‌ಗಳ ಸಂಯೋಜನೆಯ ನಿರ್ವಹಣೆ ಮಾಡಿದರು. ಉತ್ಸವ 3 ದಿನಗಳ ಕಾಲವೂ ಡ್ರೋನ್ ಷೋ ನಡೆಯಲಿದೆ.

Share This Article
Leave a Comment