Home ಕಾಮ್ರೇಡ್ ಅನಂತ ಸುಬ್ಬರಾವ್ ಚಿರಾಯುವಾಗಲಿ…
Homeಸುದ್ದಿಗಳು

ಕಾಮ್ರೇಡ್ ಅನಂತ ಸುಬ್ಬರಾವ್ ಚಿರಾಯುವಾಗಲಿ…

Share
Share

ಅದು ನಾನಿನ್ನೂ ಚಳುವಳಿಯ ವಲಯದಲ್ಲಿ ಅಂಬೆಗಾಲಿಡುತ್ತಿದ್ದ ಕಾಲ. ನನ್ನಪ್ಪ ಕೆ.ಎಸ್.ಆರ್.ಟಿ.ಸಿ ಟ್ರೇಡ್ ಯೂನಿಯನ್ ನಾಯಕರಾಗಿದ್ದ ಕಾಲ. ಅವರ ದೆಸೆಯಿಂದ ನನಗೆ ಅನಂತಸುಬ್ಬರಾವ್ ಸಂಪರ್ಕ ದೊರಕಿದ್ದಲ್ಲದೇ ಅವರ ಮಗಳಾಗಿರುವ, ನಾಡಿನ ಜನ ಚಳುವಳಿಗಾಗಿ ತಮ್ಮ ಬದುಕನ್ನೇ ಮೀಸಲಿಟ್ಟಿರುವ ಜ್ಯೋತಿ ಅನಂತಸುಬ್ಬರಾವ್ ಒಡನಾಟ ದಕ್ಕಿತು. ಅವರಿಂದ ಹೋರಾಟಗಾರರಾದ ಸಾತಿ ಸುಂದರೇಶ್ ನನಗೆ ನಿಕಟವಾದರು. ಇದೇ ಹೊತ್ತಿಗೆಲ್ಲಾ ನಾನು ಮಹೇಶ್ ಕುಮಾರ್ ರಾಥೋಡ್, ಕೆ.ಎಸ್.ಜನಾರ್ಧನ್, ಕೋಡಿಹಳ್ಳಿ ಭೀಮಣ್ಣ, ಶೌಕತ್ ಅಲಿ ಆಲೂರ್ ಹಾಗೂ ಮಹಾಲಿಂಗಪ್ಪ ಆಲಬಾಳ‌ ರವರ ನೇತೃತ್ವದಲ್ಲಿ ಆಲ್ ಇಂಡಿಯಾ ಸ್ಟೂಡೆಂಟ್ ಫೆಡರೇಶನ್ನಿನ (A.I.S.F) ಕಾರ್ಯಕರ್ತನಾಗಿ ಕೊನೆಗೆ ರಾಜ್ಯದ ಜಂಟಿ ಕಾರ್ಯದರ್ಶಿಯಾಗಿಯೂ ವಿದ್ಯಾರ್ಥಿ ಹೋರಾಟದಲ್ಲಿ ತೊಡಗಿಕೊಂಡಿದ್ದೆ. ವಿಧ್ಯಾರ್ಥಿ ಚಳುವಳಿ ಕಟ್ಟುವ ಕಾರ್ಯಾಗಾರದಲ್ಲಿ ಡಾ. ಸಿದ್ದನಗೌಡ ಪಾಟೀಲರು ಅಂಕಿ ಅಂಶಗಳ ಸಮೇತ ನೀಡುತ್ತಿದ್ದ ನಿದರ್ಶನಗಳು ನನ್ನಲ್ಲಿ ವ್ಯವಸ್ಥೆಯ ಕುರಿತಾಗಿ ಇನ್ನಷ್ಟು ಗಟ್ಟಿಯಾಗಲು ಪ್ರೇರಣೆ ನೀಡಿದ್ದವು. ಇದೇ ಅವಧಿಯಲ್ಲಿ ಹಿರಿಯ ಕಮ್ಯೂನಿಸ್ಟ್ ನಾಯಕರಾಗಿದ್ದ ಸನತ್ ಕುಮಾರ್ ಬೆಳಗಲಿ ಮತ್ತವರ ಮಡದಿ ಶಶಿಕಲಾ ಬೆಳಗಲಿ ನನಗೆ ಮಾರ್ಗದರ್ಶಕರಾಗಿ ದಕ್ಕಿದ್ದರ ನೆನಪು ನನ್ನ ಸ್ಮೃತಿ ಪಟಲದಲ್ಲಿ ಇನ್ನೂ ಹಸಿ ಹಸಿಯಾಗಿಯೇ ಜೀವಂತವಿದೆ.

ಆ ದಿನಗಳಲ್ಲಿ ವಿಜಯನಗರದ ಅನಂತಸುಬ್ಬರಾವ್ ರವರ ಮನೆ ಇತರೆ ಹೋರಾಟಗಾರರಂತೆ ನನಗೂ ಕೂಡ ಹಲವು ದಿನಗಳ ಆಶ್ರಯ ತಾಣವೂ ಆಗಿತ್ತು. ಹೋರಾಟಗಳ ಕಾರಣಕ್ಕೆ ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿದ್ದ ನನಗೆ ಮಲ್ಲೇಶ್ವರದ ವೈಯ್ಯಾಲಿ ಕಾವಲಿನ ಕಮ್ಯೂನಿಸ್ಟ್ ಪಾರ್ಟಿಯ ಕೇಂದ್ರ ಕಚೇರಿ ಘಾಟೆ ಭವನದ ಜೊತೆಗೆ, ಅನಂತ ಸುಬ್ಬರಾವ್ ರಾತ್ರಿ ಹಗಲು ಎನ್ನದೇ ಕಾರ್ಮಿಕರಿಗಾಗಿ ತುಡಿಯುತ್ತಿದ್ದ ಮಂತ್ರಿ ಮಾಲ್ ಸಮೀಪದ ಟ್ರೇಡ್ ಯೂನಿಯನ್ ಕಚೇರಿ ಕೂಡ ನನಗೆ ಆಪ್ತವಾಯಿತು. ನಾಡಿನ ಎಲ್ಲ ಪ್ರಗತಿಪರ,ದಲಿತ, ರೈತ ಹಾಗೂ ಎಡ ಚಳುವಳಿಯ ನೇತಾರರನ್ನು ಸಂಪರ್ಕಿಸಿ ತುಂಗಾ ಮೂಲ‌ ಉಳಿಸಿ ಹೋರಾಟ ರೂಪರೇಶೆ ತಯಾರಿಗಾಗಿ, ಆಗಿನ್ನೂ ಬಹಿರಂಗ ಜನ ಚಳುವಳಿಯ ಭಾಗವಾಗಿ ಓಡಾಡಿಕೊಂಡಿದ್ದ ದಿ.ಸಾಕೇತ್ ರಾಜನ್ ಕೂಡ ನನಗೆ ಸಿಕ್ಕಿದ್ದು ಅನಂತ್ ಸುಬ್ವರಾವ್ ರವರ ಕಚೇರಿಯಲ್ಲೇ. ಆಗ ಟ್ರೇಡ್ ಯೂನಿಯನ್ ವತಿಯಿಂದ ತುಂಗಾ ಮೂಲ ಉಳಿಸಿ ಹೋರಾಟಕ್ಕೆ ಬಹುಶಃ ಕರಪತ್ರದ ಸಹಾಯ ಮಾಡಲಾಗಿತ್ತು ಎಂಬ ನೆನಪು.

ಸಾತಿ ಸುಂದರೇಶ ಮೂಡಿಗೆರೆ ವಿಧಾನಸಭಾ ಚುನಾವಣೆ ಸ್ಪರ್ಧಿಸಿದ್ದಾಗ ನಾನು ಒಂದು ತಿಂಗಳು ಮೂಡಿಗೆರೆ ವಿಧಾನಸಭಾ ಕ್ಷೇತ್ರ ಓಡಾಡಿಕೊಂಡಿದ್ದೆ.

ಈ ಅವಧಿಯಲ್ಲಿ ಚುನಾವಣಾ ಪ್ರಚಾರಕ್ಕೆ ಬರುತ್ತಿದ್ದ ಅನಂತ ಸುಬ್ಬರಾವ್, ಚುನಾವಣಾ ಅಕ್ರಮ ಎಸಗುತ್ತಿದ್ದ ಇತರೆ ಪಕ್ಷಗಳ ಕುರಿತಾಗಿನ ನನ್ನ ಮಾಹಿತಿಯನ್ನು ಆಧರಿಸಿ ಚುನಾವಣಾ ಆಯೋಗ, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿಂತಲ್ಲಿಯೇ ಬೆವರು ಇಳಿಸುತ್ತಿದ್ದನ್ನು ನಾನು ಕಣ್ಣಾರೆ ಕಂಡಿರುವೆ. ಇಂತಹ ಪ್ರಬುದ್ದ ನಾಯಕ ಕೊನೆಯ ಪಕ್ಷ ವಿಧಾನಪರಿಷತ್ ಅಥವಾ ರಾಜ್ಯಸಭೆಯಲ್ಲಿ ಇರಬೇಕಿತ್ತು ಎಂಬ ನನ್ನ ಅನಿಸಿಕೆಗೆ, ‘ಅಧಿಕಾರ ರಾಜಕಾರಣಕ್ಕಿಂತ ಹೋರಾಟದ ರಾಜಕಾರಣ ತುಂಬಾ ಸಶಕ್ತವಾಗಿರುತ್ತೆ ಕಾಮ್ರೇಡ್’ ಅಂತ ತುಂಬಾ ಆಥ್ಮವಿಶ್ವಾಸದಿಂದ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಎಚ್ನಂ.ವಿ.ಅನಂತ ಸುಬ್ಬುರಾವ್

ಕೆ.ಎಸ್.ಆರ್.ಟಿ.ಸಿ ಕಾರ್ಮಿಕರಷ್ಟೇ ಅಲ್ಲದೇ ನಾಡಿನ ಅಂಗನವಾಡಿ, ಬಿಸಿಯೂಟ, ಕಟ್ಟಡ ಕಾರ್ಮಿಕ ವಲಯಗಳ ಅಸಂಘಟಿತ ವಲಯದ ಕಾರ್ಮಿಕರನ್ನು ಒಂದೆಡೆ ಸೇರಿಸಿ ಅವರ ಬದುಕಿನ ಭದ್ರತೆಗಾಗಿ ಆರಂಭಗೊಂಡ ಹೋರಾಟಗಳ ಹಿಂದೆ ಅನಂತ ಸುಬ್ಬರಾವ್ ತುಂಬಾ ಶ್ರಮವಹಿಸಿದವರು.

ಮೊನ್ನೆಯಷ್ಟೆ ಅಕ್ಕ ಜ್ಯೋತಿ ಅನಂತ ಸುಬ್ಬರಾವ್, ಕಾರ್ಯಾಗಾರ ಒಂದರ ಕುರಿತು ಫೋನಿನಲ್ಲಿ ಮಾತನಾಡುತ್ತಿದ್ದಾಗ, ತುಂಬಾ ದಿನಗಳು ಆದವು, ಅನಂತ್ ಸುಬ್ಬರಾವ್ ಕಾಮ್ರೇಡ್ ಒಟ್ಟಿಗೆ ಸ್ವಲ್ಪ ಕಾಲ ಕಳೀಬೇಕು ಅಂತ ಕೇಳಿದ್ದಾಗ, ಸೀದ ಮನೆಗೆ ಬಾರೋ ಅಂತ ಅದೇ ಪ್ರೀತಿ ವಾತ್ಸಲ್ಯ ತುಂಬಿದ ಅಂತಃಕರಣದಿಂದ ಆಹ್ವಾನಿಸಿದ್ದರು. ಆದರೆ ಅನಂತ ಸುಬ್ಬರಾವ್ ಇಂದು ಸಂಜೆ ಅಸ್ತಂಗತರಾದ ಸುದ್ದಿ ಕೇಳಿದ ಕ್ಷಣದಿಂದ ಮನಸ್ಸು ತುಂಬಾ ಭಾರವಾಗಿದೆ. ಇನ್ನೆಂದೂ ಅನಂತ್ ಸುಬ್ವರಾವ್ ನನಗೆ ಭೇಟಿ ಆಗಲ್ಲ ಅನ್ನುವ ನೋವು ನನ್ನ ಕೊನೆಯ ಉಸಿರು ಇರುವವರೆಗೂ ಕಾಡಲಿದೆ.

ಈಗಷ್ಟೇ ನನ್ನಪ್ಪ ಫೋನ್ ಮಾಡಿದ್ದರು. ನಾನು ಕಾಮ್ರೇಡ್ ಅನಂತ್ ಸುಬ್ಬರಾವ್ ನೋಡಲು ಹೊರಟಿದ್ದೇನೆ, ನೀನು ಬಾ ಅಂತಾ ಕರೆದರು. ಅವರ ಮಾತಿಗೆ ಏನು ಹೇಳಬೇಕೋ ಅಂತ ಗೊತ್ತಾಗದೇ ಮನಸ್ಸು ಇನ್ನಷ್ಟು ವಿಹ್ವಲಗೊಂಡಿದೆ.
ಹಾಸನದ ಬಾಗೂರು-ನವಿಲೆ ಹೋರಾಟದ ಸಂಧರ್ಭದಲ್ಲಿ ದೇವೇಗೌಡರು ಮಾಡಿಸಿದ್ದ ಪೊಲೀಸ್ ಲಾಟಿ ಚಾರ್ಜ್ ಸಂಧರ್ಭದ ನಂತರದ ದಿನಗಳಲ್ಲಿ, ಕಾಮ್ರೇಡ್ ಅನಂತ ಸುಬ್ಬರಾವ್ ಸಿಡಿದು ನಿಂತಿದ್ದ ಪರಿಯನ್ನು ಬಹುಶಃ ದೇವೇಗೌಡರು ಇನ್ನೂ ಮರೆತಿರಲಿಕ್ಕಿಲ್ಲ.

ಇಂತಹ ಖಚಿತ ಹಾಗೂ ಬದ್ದತೆಯ ಜನಚಳುವಳಿಯ ನಾಯಕ ಇಂದು ನಮ್ಮೆಲ್ಲರನ್ನು ಅಗಲಿದ್ದು, ಹೋರಾಟದ ರಾಜಕಾರಣಕ್ಕೆ ತುಂಬಲಾರದ ನಷ್ಟವಂತೂ ಹೌದು. ಕನಿಷ್ಟ ಇಪ್ಪತ್ತು ವರ್ಷಗಳ ಅವರ ಮತ್ತು ನನ್ನ ಒಡನಾಟ ಇಂದಿಗೆ ಅಂತ್ಯಗೊಂಡಿದೆ ಅಂತ ಹೇಳಲು ಮನಸ್ಸು ತುಂಬಾ ಕದಡಿಹೋಗಿದೆ.

ಕಾಮ್ರೇಡ್ ಅನಂತ ಸುಬ್ಬರಾವ್ ಚಿರಾಯುವಾಗಲಿ… ಚಿರಾಯುವಾಗಲಿ…

ಇರ್ಫಾನ್ ಮುದಗಲ್

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಕಾಂಗ್ರೆಸ್ ಮುಖಂಡ ಶಶಿಧರ ಪೂಜಾರ ಜನ್ಮದಿನಾಚರಣೆ

ಹರಪನಹಳ್ಳಿ: ಇಲ್ಲಿನ ತಾಲ್ಲೂಕು ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾದ ಶಶಿಧರ ಪೂಜಾರ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು...

Homeಸುದ್ದಿಗಳು

ರೋಗನಿರೋಧಕ ಶಕ್ತಿ ಹೆಚ್ಚಿಸಲು ತಾಯಿಯ ಎದೆಹಾಲು ಅತ್ಯಗತ್ಯ: ಡಿಹೆಚ್‌ಒ ಡಾ.ಟಿ.ಲಿಂಗರಾಜು

ವಿಜಯನಗರ (ಹೊಸಪೇಟೆ) : ಸ್ತನ್ಯಪಾನ ಮಾಡುವುದು ತಾಯಿ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಬಹುಮುಖ್ಯವಾಗಿದೆ....

Homeಸುದ್ದಿಗಳು

ಸಂಪುಟ ವಿಸ್ತರಣೆ ಕೌತುಕಕ್ಕೆ ಇಂದು ತೆರೆ: ಸಂಜೆ ರಾಜಭವನದಲ್ಲಿ 20 ನೂತನ ಸಚಿವರ ಪದಗ್ರಹಣ

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಸಚಿವ ಸಂಪುಟ ವಿಸ್ತರಣೆ ಕಸರತ್ತಿಗೆ ಕೊನೆಗೂ...

Homeಶಿಕ್ಷಣ

ಬಿ.ಐ.ಇ.ಟಿ. ಯಲ್ಲಿ ನೈಲಿಟ್‌ನ 90 ಗಂಟೆಗಳ ‘ಚಿಪ್‌ಕ್ರಾಫ್ಟ್’ ಸೆಮಿಕಂಡಕ್ಟರ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

ದಾವಣಗೆರೆ : ಬಾಪೂಜಿ ಇಂಜಿನಿಯರಿಂಗ್  ಮತ್ತು ತಾಂತ್ರಿಕ ಮಹಾವಿದ್ಯಾಲಯ ಸಂಸ್ಥೆಯ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.