ಹರಪನಹಳ್ಳಿ : ನಗರಸಭೆಯ ಹೊರಗುತ್ತಿಗೆ ಪದ್ದತಿಯಡಿ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದ ನಿರುದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ನೇತೃತ್ವದಲ್ಲಿ ಪದಾಧಿಕಾರಿಗಳು ನಗರಸಭೆ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಪೌರಾಯುಕ್ತೆ ರೇಣುಕಾ ಎಸ್.ದೇಸಾಯಿ ಅವರಿಗೆ ಮನವಿ ಸಲ್ಲಿಸಿದರು.
ಹರಪನಹಳ್ಳಿ ನಗರದ 5ನೇ ವಾರ್ಡಿನಲ್ಲಿರುವ ಬಾಪೂಜಿ ನಗರದಲ್ಲಿ ಮಾದಿಗ ಜಾತಿಗೆ ಸೇರಿದ ಕುಟುಂಬಗಳು ವಾಸವಾಗಿವೆ. ಕೆಲ ಯುವಕರು ಒಂದಿಷ್ಟು ಶಿಕ್ಷಣ ಪಡೆದಿದ್ದು, ಕೆಲಸಕ್ಕಾಗಿ ಪರದಾಡುತ್ತಿದ್ದಾರೆ. ಇತ್ತ ಸರ್ಕಾರಿ ನೇಮಕಾತಿಯಲ್ಲೂ ಅವಕಾಶ ವಂಚಿತರಾಗಿದ್ದಾರೆ. ನಗರಸಭೆಗೆ ಹೆಚ್ಚಿನ ಪೌರ ಕಾರ್ಮಿಕರನ್ನು ಹೊರಗುತ್ತಿಗೆ ಪದ್ದತಿಯಡಿ ಕೆಲಸಕ್ಕೆ ಸೇರಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದಾಗ, ಈ ಕಾಲೊನಿ ನಿರುದ್ಯೋಗಿ ಯುವಕರಿಗೆ ಆಧ್ಯತೆ ನೀಡಬೇಕು ಎಂದು ತಾಲ್ಲೂಕು ಅಧ್ಯಕ್ಷ ಕೆ.ಸುಭಾಷ್ ಅವರು ಒತ್ತಾಯಿಸಿದರು. ಉಪಾಧ್ಯಕ್ಷ ಬಿದ್ದಾಡಿ ನಾಗರಾಜ್, ಮಲ್ಲಿಕಾರ್ಜುನ, ಸಿ.,ಪ್ರಕಾಶ್, ರಮೇಶ ತೌಡೂರು, ಕೆ.ಕೋಟೆಪ್ಪ, ಆರ್.ಕೋಟೆಪ್ಪ, ಮುತ್ತಪ್ಪ, ಅಂಜಿನಪ್ಪ ಮಾಳಗಿ, ಶ್ರೀಕಾಂತ, ನಾಗರಾಜ್, ನಿಂಗಪ್ಪ, ನಾಗೇಂದ್ರಪ್ಪ ಇದ್ದರು.
