ಹರಪನಹಳ್ಳಿ : ಗೋಕಟ್ಟೆ (ಚೆಕ್ ಡ್ಯಾಂ)ನಲ್ಲಿ ಗೆಳೆಯರೊಂದಿಗೆ ಈಜಲು ಹೋಗಿದ್ದ ಬಾಲಕನೊಬ್ಬ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ರಾಗಿಮಸಲವಾಡ ಗ್ರಾಮದಲ್ಲಿ ಭಾನುವಾರ ಜರುಗಿದ್ದು, ಸೋಮವಾರ ಮೃತದೇಹ ಪತ್ತೆಯಾಗಿದೆ.
ಗ್ರಾಮದ ಹನುಮಂತಪ್ಪ ಮತ್ತು ಭಾಗ್ಯಮ್ಮ ದಂಪತಿಯ ಪುತ್ರ ಸಿದ್ದಾರ್ಥ (11) ಸಾವನ್ನಪ್ಪಿದ ಬಾಲಕ. ಗ್ರಾಮದ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಬಾಲಕ, ಭಾನುವಾರ ಶಾಲೆಗೆ ರಜೆ ಇದ್ದ ಕಾರಣ, ಸಂಜೆ 4 ಗಂಟೆ ವೇಳೆಗೆ ಮೂರು ಜನ ಸ್ನೇಹಿತರು ಗೋಕಟ್ಟೆಗೆ ಈಜಲು ಹೋಗಿದ್ದಾರೆ. ಮೊದಲು ಮೃತ ಸಿದ್ದಾರ್ಥ ನೀರಿಗೆ ಇಳಿದಿದ್ದು, ಮುಳುಗಿದ್ದಾನೆ. ದಡದಲ್ಲಿ ನಿಂತಿದ್ದ ಸ್ನೇಹಿತರು ಆತಂಕಗೊಂಡು, ಗ್ರಾಮಸ್ಥರನ್ನು ಕರೆತರುವಷ್ಟರಲ್ಲಿ ಸಿದ್ದಾರ್ಥ್ ನೀರಲ್ಲಿ ನಾಪತ್ತೆಯಾಗಿದ್ದಾನೆ. ಕತ್ತಲು ಆವರಿಸಿದ್ದರಿಂದ ಪತ್ತೆ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು.

ಬೆಳಗಿನ ಜಾವವೇ ಗೋಕಟ್ಟೆ ತೆರಳಿ, ಯಂತ್ರ ಚಾಲಿತ ಮೋಟಾರಿನಿಂದ ನೀರು ಹೊರಗಡೆ ಸಾಗಿಸಿದ್ದಾರೆ. ನೀರು ಇಳಿಮುಖವಾದಾಗ ನೀರಿನ ಕಟ್ಟೆಗಿಳಿದ ಗ್ರಾಮಸ್ಥರು ಬಾಲಕನ ಮೃತದೇಹ ಪತ್ತೆ ಹಚ್ಚಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತೆಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಹನುಮಂತಪ್ಪ ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ. ಪುತ್ರನನ್ನು ಕಳೆದುಕೊಂಡಿರುವ ಹೆತ್ತವರು ಮತ್ತು ಸಹೋದರಿಯರ ಅಕ್ರಂಧನ ಮುಗಿಲು ಮುಟ್ಟಿತ್ತು. ಹಲುವಾಗಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a comment