ವಿಜಯನಗರ (ಹೊಸಪೇಟೆ) : ಜಿಲ್ಲೆಯಲ್ಲಿ ಡೆಂಗ್ಯೂ ಮತ್ತು ಮಲೇರಿಯಾ, ಕಾಲರಾದಂತಹ ಮಾರಣಾಂತಿಕ ರೋಗಗಳಿಂದ ಶೇ.1೦೦ ರಷ್ಟು ಮುಕ್ತ ಜಿಲ್ಲೆಯಾಗಿಸಲು ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮವಹಿಸಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸೂಚನೆ ನೀಡಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಂಬರುವ ದಿನಗಳಲ್ಲಿ ಮುಂಗಾರು ಮಳೆ ಆರಂಭವಾಗುತ್ತಿದ್ದು, ಕಲುಷಿತ ನೀರು, ಹವಾಮಾನ ವೈಪರೀತ್ಯದಿಂದಾಗಿ ಡೆಂಗ್ಯೂ, ಮಲೇರಿಯಾ, ಕಾಲರಾದಂತಹ ಸಾಂಕ್ರಾಮಿಕ ರೋಗಗಳ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಈ ಬಗ್ಗೆ ಸಾರ್ವಜನಿಕರಿಗೆ ಸ್ಥಳೀಯ ಆಡಳಿತ ಸಂಸ್ಥೆ ಸ್ವಚ್ಚ ಹಾಗೂ ಶುದ್ಧ ಕುಡಿಯುವ ನೀರು ಪೂರೈಸಬೇಕು. ಒಂದು ವೇಳೆ ಪೈಪ್ಲೈನ್ ದುರಸ್ಥಿ ಇನ್ನಿತರೆ ಕಾರಣಗಳಿಂದ ಕಲುಷಿತ ನೀರು ಸರಬರಾಜಾಗಿ ಸಾರ್ವಜನಿಕರ ಆರೋಗ್ಯದಲ್ಲಿ ಏರುಪೇರು ಉಂಟಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಾಗೆಯೇ ಮುಂಗಾರು ಸಮೀಪಿಸುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಂಭವ ಹೆಚ್ಚಿರುತ್ತದೆ. ಆದ್ದರಿಂದ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಡೆಂಗ್ಯೂ, ಕಾಲರಾ, ಮಲೇರಿಯಾ ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಸ್ಥಳೀಯ ಆಡಳಿತ ಸಂಸ್ಥೆಯ ಅಧಿಕಾರಿಗಳು ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ಚರಂಡಿ ಸ್ವಚ್ಚತೆಗೆ ಆದ್ಯತೆ ನೀಡಬೇಕು. ಶಾಲಾ ಕಾಲೇಜುಗಳಲ್ಲಿ ಮುಂಜಾನೆ ಪ್ರಾರ್ಥನೆ ನಂತರ ಪ್ರತಿದಿನ ಈ ಕಾಯಿಲೆಗಳಿಂದಾಗುವ ದುಷ್ಪರಿಣಾಮದ ಬಗ್ಗೆ ತಿಳಿ ಹೇಳಬೇಕು. ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಇಲಾಖೆಗಳ ಪಾತ್ರ ಅಷ್ಟೇ ಅಲ್ಲದೇ ಸಾರ್ವಜನಿಕರ ಸಹಕಾರವೂ ಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ಮನೆಗಳ ಸುತ್ತ ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಕುದಿಸಿ, ಆರಿಸಿದ ನೀರು ಕುಡಿಯಬೇಕು.
ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು. ಮಳೆಗಾಲ ಆರಂಭವಾಗುವ ಮುನ್ನವೇ ಆಶಾ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸಹಭಾಗಿತ್ವದೊಂದಿಗೆ ಮನೆ-ಮನೆ ಭೇಟಿ ನೀಡಿ ಸೊಳ್ಳೆ ಉತ್ಪತ್ತಿ ತಾಣ ಗುರುತಿಸಿ ಲಾರ್ವಾ ಉತ್ಪತ್ತಿಯಾಗದಂತೆ ತಡೆಯಬೇಕು. ಅಗತ್ಯವಿದ್ದಲ್ಲಿ ಫಾಗಿಂಗ್ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಡೆಂಗ್ಯೂ ನಿಯಂತ್ರಣದಲ್ಲಿ ವಿಜಯನಗರ ರಾಜ್ಯಕ್ಕೆ ಮಾದರಿ:
ಕಳೆದ ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. 2023-24ರಲ್ಲಿ 323 ರಷ್ಟಿದ್ದ ಪ್ರಕರಣಗಳು, ಪ್ರಸಕ್ತ ಸಾಲಿನಲ್ಲಿ ಕೇವಲ ೧೪ಕ್ಕೆ ಇಳಿಕೆಯಾಗಿವೆ. ಆರೋಗ್ಯ ಇಲಾಖೆ ಕೈಗೊಂಡ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮ ಮತ್ತು ಸಾಧನೆಯಿಂದ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಲಸಿಕೆಗೆ ಸಹಕರಿಸಿ:
ಜಿಲ್ಲಾದ್ಯಂತ 15 ವರ್ಷದೊಳಗಿನ (ವಿಶೇಷವಾಗಿ 8 ಮತ್ತು 9ನೇ ತರಗತಿಯ) ಒಟ್ಟು 15,000 ಮಕ್ಕಳನ್ನು ತಲುಪುವ ಗುರಿ ಹೊಂದಲಾಗಿದ್ದು, ಪ್ರಸ್ತುತ ಶೇ.35 ರಷ್ಟು ಪ್ರಗತಿಯಾಗಿದೆ. ಬಾಕಿ ಉಳಿದಿರುವ ಗುರಿಯನ್ನು ವ್ಯವಸ್ಥಿತವಾಗಿ ತಲುಪಲು ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಗ್ರಾಮ ಅಥವಾ ವಾರ್ಡ್ವಾರು ಲಸಿಕಾ ಅಭಿಯಾನ ಕೈಗೊಳ್ಳಬೇಕು. ಈ ಬಗ್ಗೆ ಪೋಷಕರಲ್ಲಿ ಭೀತಿಯ ಭಾವನೆ ಇದ್ದು ಸಹಕರಿಸುತ್ತಿಲ್ಲ. ಆದ್ದರಿಂದ ಹದಿಹರೆಯದ ಮಕ್ಕಳಲ್ಲಿ ಉಂಟಾಗುವ ಕ್ಯಾನ್ಸರ್ನಂತಹ ಮಾರಣಾಂತಿಕ ಕಾಯಿಲೆಯಿಂದಾಗುವ ಪರಿಣಾಮವನ್ನು ಪೋಷಕರಿಗೆ ಅರ್ಥೈಸಬೇಕಿದೆ ಎಂದರು.
ವಿಶ್ವಾಸ ಮೂಡಿಸಲು ವಿನೂತನ ಪ್ರಯೋಗ:
ನಗರ ಸೇರಿದಂತೆ ಕೆಲವು ಗ್ರಾಮೀಣ ಭಾಗದಲ್ಲಿ ಲಸಿಕೆ ಪಡೆಯಲು ಕೆಲವು ಸಮುದಾಯದ ಪೋಷಕರು ಹಿಂಜರಿಯುತ್ತಿರುವ ಬಗ್ಗೆ ಮಾಹಿತಿ ಇದೆ. ಆದ್ದರಿಂದ ಅಂತಹ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲು ವಿನೂತನ ಕ್ರಮ ಕೈಗೊಳ್ಳಲಾಗಿದೆ. ಲಸಿಕೆ ಪಡೆದ ಆಯಾ ಸಮುದಾಯದ ಮಕ್ಕಳ ಮೂಲಕವೇ ಅವರದ್ದೇ ಆದ ಸ್ಥಳೀಯ ಭಾಷೆಯಲ್ಲಿ ಕಿರು ವಿಡಿಯೋ ಸಂದೇಶಗಳನ್ನು ಸಿದ್ಧಪಡಿಸಿ ಪೋಷಕರಲ್ಲಿನ ಭೀತಿ ನಿವಾರಿಸಲಾಗುತ್ತಿದೆ. ಈ ಮೂಲಕ ಲಸಿಕಾ ಅಭಿಯಾನ ಶೇ.1೦೦ ಗುರಿ ತಲುಪಲು ಸಾಧ್ಯ ಎಂದು ಆರ್ಸಿ ಹೆಚ್ ಅಧಿಕಾರಿ ಜಂಬಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ನೋಂಗ್ಜಯ್ ಮಹ್ಮದ್ ಅಲಿ ಅಕ್ರಂ ಷಾ, ಡಿಹೆಚ್‌ಓ ಡಾ.ಎಲ್.ಆರ್.ಶಂಕರ್ ನಾಯ್ಕ್, ಆರ್ಸಿಹೆಚ್ ಅಧಿಕಾರಿ ಡಾ.ಜಂಬಯ್ಯ, ಪಶುಸಂಗೋಪನೆ ಇಲಾಖೆ ಅಧಿಕಾರಿ ರವಿ ಜಿಲ್ಲಾ ಅನುಷ್ಠಾನಾಧಿಕಾರಿ ಷಣ್ಮುಖ ನಾಯ್ಕ ಹಾಗೂ ವಿವಿಧ ತಾಲೂಕುಗಳ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.
Leave a comment