ಹರಪನಹಳ್ಳಿ: ತಾಲ್ಲೂಕಿನ ಹಲುವಾಗಲು ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದಾಗ ನೀರಲ್ಲಿ ಮುಳುಗಿ ಅಣ್ಣ ತಮ್ಮ ಜಲಸಮಾಧಿ ಯಾಗಿದ್ದು, ಕಿರಿಯ ಮಗನನ್ನು ತಂದೆ ರಕ್ಷಿಸಿದ್ದಾರೆ.
ಹಲುವಾಗಲು ಗ್ರಾಮದ ನಿವಾಸಿ ಮಂಜಪ್ಪ ಅವರ ಪುತ್ರರಾದ ಎಂ.ಜಿ. ಮನು (19) ಹಾಗೂ ಎಂ.ಜಿ. ಪ್ರಜ್ವಲ್ (18) ಎಂದು ಗುರುತಿಸಲಾಗಿದೆ. ಮನು ಅವರು ಬಿ.ಇ. (ಎಂಜಿನಿಯರಿಂಗ್) ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರೆ, ಪ್ರಜ್ವಲ್ ಪಿಯುಸಿ ಓದುತ್ತಿದ್ದ.
ಘಟನೆ ವಿವರ : ಗ್ರಾಮದ ಕೃಷಿಕರಾದ ಎನ್.ಜಿ. ಮಂಜಪ್ಪ ಅವರು ತಮ್ಮ ಮೂವರು ಮಕ್ಕಳೊಂದಿಗೆ ತೆರಳಿದ್ದಾಗ ಈ ದುರಂತ ಸಂಭವಿಸಿದೆ. ಮಕ್ಕಳು ನೀರಿನಲ್ಲಿ ಇಳಿದಾಗ ಆಯಾತಪ್ಪಿ ಮುಳುಗಲಾರಂಭಿಸಿದ್ದಾರೆ.
ತಕ್ಷಣವೇ ಕಾರ್ಯಪ್ರವೃತ್ತರಾದ ತಂದೆ ಮಂಜಪ್ಪ ಅವರು ತಮ್ಮ ಕಿರಿಯ ಮಗ ಚಿರಂಜೀವಿಯನ್ನು ಕಷ್ಟಪಟ್ಟು ನೀರಿನಿಂದ ಹೊರತಂದು ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ, ದುರಾದೃಷ್ಟವಶಾತ್ ಉಳಿದ ಇಬ್ಬರು ಮಕ್ಕಳಾದ ಮನು ಹಾಗೂ ಪ್ರಜ್ವಲ್ ಅವರನ್ನು ರಕ್ಷಿಸಲು ಸಾಧ್ಯವಾಗದೆ, ಇಬ್ಬರೂ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತದೇಹ ಹೊರತೆಗೆದು ಸರ್ಕಾರಿ ಆಸ್ಪತ್ರೆ ಶವಗಾರಕ್ಕೆ ಸಾಗಿಸಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಎಸ್ಪಿ ಎಸ್.ಜಾಹ್ನವಿ ಬೇಟಿ ನೀಡಿ ಪರಿಶೀಲಿಸಿದರು. ಹಲುವಾಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
