ಹರಪನಹಳ್ಳಿ: “ಗೌತಮ ಬುದ್ಧ ಅವರು ಜಗತ್ತಿನ ಶಾಂತಿಯ ಸಂಕೇತವಾಗಿದ್ದು, ಇಡೀ ಮಾನವಕುಲಕ್ಕೆ ಸಮಾನತೆಯ ಸಂದೇಶವನ್ನು ಸಾರಿದ ಮಹಾನ್ ಚೇತನ” ಎಂದು ಕಾಂಗ್ರೆಸ್ ಮುಖಂಡ ಕೋಡಿಹಳ್ಳಿ ಭೀಮಪ್ಪ ಅಭಿಪ್ರಾಯಪಟ್ಟರು.
ನಗರದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ (ಭೀಮವಾದ) ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಕಾರ್ಮಿಕ ದಿನಾಚರಣೆ ಮತ್ತು ಬುದ್ಧ ಪೂರ್ಣಿಮೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬುದ್ಧ, ಏಸುಕ್ರಿಸ್ತ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ವಿರೋಧಿಸುವುದು ಸಂವಿಧಾನಕ್ಕೆ ಮಾಡುವ ಅಪಪ್ರಚಾರ ಮಾಡಿದಂತಾಗುತ್ತದೆ. ಸಂವಿಧಾನವನ್ನು ಗೌರವಿಸದವರು ದೇಶದ್ರೋಹಿಗಳಾಗುತ್ತಾರೆ. ಕಾರ್ಮಿಕರಿಗೆ ಇಂದು ನ್ಯಾಯ ಸಿಕ್ಕಿರುವುದು ಸಂವಿಧಾನದಿಂದಲೇ. ಹೀಗಾಗಿ ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ನಮ್ಮ ಹೋರಾಟ ನಿರಂತರವಾಗಿರಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಉಪನ್ಯಾಸಕ ಹೆಚ್. ಮಲ್ಲಿಕಾರ್ಜುನ, ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಅನನ್ಯ. ಆದರೆ ಅವರ ಸ್ಥಿತಿ ಶೋಚನೀಯವಾಗಿದ್ದು, ಅವರಿಗೆ ಸಾಮಾಜಿಕ ಭದ್ರತೆ ಮತ್ತು ನಿವೃತ್ತಿ ಪಿಂಚಣಿ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ನಿರೀಕ್ಷಕ ಪ್ರಕಾಶ್ ಗೌಡ ಮಾತನಾಡಿ, ರೈತರು ಮತ್ತು ಕಾರ್ಮಿಕರು ದೇಶದ ಬೆನ್ನೆಲುಬು. ಕಾರ್ಮಿಕ ಕಾಯ್ದೆಯಡಿ ನಿಗದಿಪಡಿಸಿದ ಕೆಲಸದ ಅವಧಿ ಮತ್ತು ವಿಶ್ರಾಂತಿಯ ಸೌಲಭ್ಯಗಳನ್ನು ಪ್ರತಿಯೊಬ್ಬರೂ ತಿಳಿಯಬೇಕು. ಅಸಂಘಟಿತ ಕಾರ್ಮಿಕರು ಸರ್ಕಾರ ಜಾರಿಗೆ ತಂದಿರುವ ‘ಶ್ರೀಮಾನ್ ಧನ್’ ನಂತಹ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ನಿಶ್ಚಿತ ಪಿಂಚಣಿ ಪಡೆಯಬೇಕು ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮೆಕಾನಿಕ್, ಹೋಟೆಲ್, ಪೌರಕಾರ್ಮಿಕರು, ಕಟ್ಟಡ ಕಾರ್ಮಿಕರು ಹಾಗೂ ವೆಲ್ಡಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸುತ್ತಿರುವ ಕಾರ್ಮಿಕರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಾಹಿತಿ ಇಸ್ಮಾಯಿಲ್ ಎಲಿಗಾರ ಮಾತನಾಡಿ, “ಸುಳ್ಳುಗಳ ಮಾರುಕಟ್ಟೆಯಲ್ಲಿ ಸತ್ಯವನ್ನು ಪ್ರತಿಪಾದಿಸುವ ಏಕೈಕ ಶಕ್ತಿ ಸಂವಿಧಾನ. ಬುದ್ಧ, ಬಸವ, ಅಂಬೇಡ್ಕರ್ ಅವರು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದಾರೆ” ಎಂದರು.
ದಲಿತ ಸಂಘರ್ಷ ಸಮಿತಿ ಹರಪನಹಳ್ಳಿ ತಾಲ್ಲೂಕು ಅಧ್ಯಕ್ಷ ಕೆ. ಸುಭಾಷ, ಜಿಲ್ಲಾ ಸಂಚಾಲಕ ಸವಣೂರು ಯಲ್ಲಪ್ಪ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಛತ್ರಪತಿ, ಬಾಬು, ರಾಜು, ಪಕ್ಕೀರಪ್ಪ, ಚಂದ್ರಪ್ಪ, ಕೋಟೆಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Leave a comment