ಆದರ್ಶ ವಿದ್ಯಾಲಯ : ಅಜಯ್‍ ಗುಪ್ತಾ ಮಕ್ಕಳೊಂದಿಗೆ ಸಂವಾದ

Sirisuddi Kannada
2 Min Read

ಹರಪನಹಳ್ಳಿ (ವಿಜಯನಗರ): ತಾಲೂಕಿನ ಅನಂತಹಳ್ಳಿ ಗ್ರಾಮದಲ್ಲಿರುವ ಪಿಎಂಶ್ರೀ ಆದರ್ಶ ವಿದ್ಯಾಲಯಕ್ಕೆ ಗುರುವಾರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಉನ್ನತಮಟ್ಟದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ಶಾಲೆಯ ಅತ್ಯುತ್ತಮ ಸ್ಥಿತಿಗತಿ ಹಾಗೂ ಮಕ್ಕಳ ಶೈಕ್ಷಣಿಕ ಕಲಿಕಾ ಪ್ರಗತಿಯನ್ನು ಕಂಡು ಅಧಿಕಾರಿಗಳು ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾನೂನು ಮತ್ತು ನ್ಯಾಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಯ್ ಗುಪ್ತಾ ಹಾಗೂ ರಾಜ್ಯ ಸಮಗ್ರ ಶಿಕ್ಷಣ ಇಲಾಖೆ ಯೋಜನಾ ನಿರ್ದೇಶಕಿ ಕೆ.ವಿದ್ಯಾಕುಮಾರಿ ಅವರ ನೇತೃತ್ವದ ತಂಡ ಶಾಲೆಯಲ್ಲಿ ತಪಾಸಣೆ ನಡೆಸಿತು. ಆದರ್ಶ ವಿದ್ಯಾಲಯದಲ್ಲಿರುವ ವಿಜ್ಞಾನ, ಗಣಿತ ಹಾಗೂ ಸಮಾಜ ವಿಜ್ಞಾನ ಪ್ರಯೋಗಾಲಯಗಳಿಗೆ ತೆರಳಿ ವೀಕ್ಷಿಸಿದ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.

ಶಾಲೆಯ ಸೇವಾದಳ, ಸ್ಕೌಟ್ ಮತ್ತು ಗೈಡ್‍, ಸಂಗೀತ, ಕ್ರೀಡೆ ಹಾಗೂ ಯೋಗಪಟುಗಳ ಪ್ರತಿಭೆಗಳನ್ನು ವೀಕ್ಷಿಸಿ ಅಧಿಕಾರಿಗಳು ಸಂತಸಪಟ್ಟರು. ಇದೇ ವೇಳೆ ಶಾಲೆಯ ಅಡಿಟೋರಿಯಂ, ಹೊರಾಂಗಣ, ಗ್ರಂಥಾಲಯ ಹಾಗೂ ಅಡುಗೆ ಕೋಣೆಯಲ್ಲಿನ ಅಚ್ಚುಕಟ್ಟಾದ ವ್ಯವಸ್ಥೆಗೆ ಶಭಾಷ್‌ಗಿರಿ ನೀಡಿದರು.

ಶಾಲೆಯ ನಿರ್ವಹಣೆಗೆ ಕೇಂದ್ರದ ಅಧಿಕಾರಿಗಳ ಶ್ಲಾಘನೆ

ಪರಿಶೀಲನೆ ಬಳಿಕ ಮಾತನಾಡಿದ ಕಾನೂನು ಮತ್ತು ನ್ಯಾಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಯ್ ಗುಪ್ತಾ, “ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಪಡೆದು ನಡೆಯುತ್ತಿರುವ ಪಿಎಂ ಶ್ರೀ ಆದರ್ಶ ವಿದ್ಯಾಲಯದ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು. ಇಲ್ಲಿ ಅತ್ಯಂತ ಅಚ್ಚುಕಟ್ಟಾದ ವ್ಯವಸ್ಥೆ ಇದೆ, ಜೊತೆಗೆ ಮಕ್ಕಳ ಕಲಿಕೆಯು ಉತ್ತಮವಾಗಿದೆ” ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಹಾಸ್ಟೆಲ್ ಆರಂಭಕ್ಕೆ ಶಿಫಾರಸು: ಕೆ.ವಿದ್ಯಾಕುಮಾರಿ

ರಾಜ್ಯ ಸಮಗ್ರ ಶಿಕ್ಷಣ ಇಲಾಖೆ ಯೋಜನಾ ನಿರ್ದೇಶಕಿ ಕೆ.ವಿದ್ಯಾಕುಮಾರಿ ಮಾತನಾಡಿ, “ಪಿಎಂ ಶ್ರೀ ಶಾಲೆಗಳನ್ನು ಉನ್ನತೀಕರಣ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನದಡಿ ರಾಜ್ಯದ ಒಟ್ಟು 575 ಶಾಲೆಗಳು ಮಂಜೂರಾಗಿವೆ. ಇಲ್ಲಿ ಅನುಷ್ಠಾನಗೊಂಡಿರುವ ಕಾಮಗಾರಿಗಳ ಗುಣಮಟ್ಟ ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಇದರ ಭಾಗವಾಗಿಯೇ ಕೇಂದ್ರ ಸರ್ಕಾರದಿಂದ ಅಜಯ್ ಗುಪ್ತಾ ಅವರು ಆಗಮಿಸಿ ಪರಿಶೀಲಿಸಿದ್ದಾರೆ. ಶಾಲೆಗಳ ಸಮಗ್ರ ಶಿಕ್ಷಣದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ” ಎಂದು ತಿಳಿಸಿದರು.

“ರಾಜ್ಯದ ಆದರ್ಶ ಶಾಲೆಗಳಿಗೆ ಪ್ರಸ್ತುತ ವಸತಿ ನಿಲಯದ (ಹಾಸ್ಟೆಲ್) ವ್ಯವಸ್ಥೆಯಿಲ್ಲ. ಹೀಗಾಗಿ ಅಗತ್ಯವಿರುವ ಕಡೆಗಳಲ್ಲಿ ಹಾಸ್ಟೆಲ್ ಆರಂಭಿಸಲು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಶೀಘ್ರವೇ ಶಿಫಾರಸ್ಸು ಪತ್ರ ಕಳಿಸಲಾಗುವುದು” ಎಂಬ ಮಹತ್ವದ ಮಾಹಿತಿಯನ್ನು ಅವರು ನೀಡಿದರು.

ಉಪಸ್ಥಿತರಿದ್ದ ಗಣ್ಯರು:

ವಿಜಯನಗರ ಜಿಲ್ಲಾ ಉಪನಿರ್ದೇಶಕ ವೆಂಕಟೇಶ್ ರಾಮಚಂದ್ರಪ್ಪ, ಪಿಎಂಶ್ರೀ ನೋಡಲ್ ಅಧಿಕಾರಿ ಪಾರ್ವತಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ, ಶಾಲೆಯ ಮುಖ್ಯಶಿಕ್ಷಕ ಎಚ್.ಕೆ.ಚಂದ್ರಪ್ಪ, ಸಹಾಯಕ ನಿರ್ದೇಶಕ ನಾಗರಾಜ್, ಸಮನ್ವಯಾಧಿಕಾರಿ ಹೊನ್ನೆತ್ತೆಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಜಿ.ಸಿದ್ದನಗೌಡ, ನಿಕಟಪೂರ್ವ ಅಧ್ಯಕ್ಷ ಶೀಲ್ಯಾನಾಯ್ಕ, ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಕವಿತಾ, ಜಿ.ಶಾರದಾ, ರಾಧಾ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಎಚ್.ಸಲೀಂ, ಸಿಬ್ಬಂದಿ ವರ್ಗ ಮತ್ತು ಆದರ್ಶ ಶಾಲೆಯ ಶಿಕ್ಷಕರು ಹಾಜರಿದ್ದರು.

 

Share This Article
Leave a Comment