ಹೊಸಪೇಟೆ : ಅರಣ್ಯ ಹಕ್ಕುಗಳ ಮಾನ್ಯತೆ ಕಾಯ್ದೆ ಕಾರ್ಯಾಗಾರ

Sirisuddi Kannada
2 Min Read

ಹೊಸಪೇಟೆ (ವಿಜಯನಗರ ) :ಬುಡಕಟ್ಟು ನಿವಾಸಿಗಳಿಗೆ ಹಾಗೂ ಸಾಂಪ್ರಾದಾಯಿಕ ಅರಣ್ಯ ನಿವಾಸಿಗಳಿಗೆ ಕಾನೂನು ಬದ್ದವಾಗಿ ಭೂಮಿ ಹಕ್ಕಿಲ್ಲದವರಿಗೆ ಭೂಮಿ ನೀಡುವ ಮೂಲಕ ನ್ಯಾಯ ಒದಗಿಸುವುದೇ ಕಾಯ್ದೆಯ ಉದ್ದೇಶವಾಗಿದೆ. ಆದ್ದರಿಂದ ಅರ್ಹ ಫಲಾನುಭವಿಗಳು ಈ ಕಾಯ್ದೆಯಿಂದ ವಂಚಿರಾಗದಂತೆ ಅಧಿಕಾರಿಗಳು ಎಚ್ಚರವಹಿಸಿ ಕಾರ್ಯನಿರ್ವಹಿಸಬೇಕು ಎಂದು ಉಪವಿಭಾಗಾಧಿಕಾರಿ ವಿವೇಕ್ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾದ ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಕಾಯ್ದೆ 2006 ಮತ್ತು ನಿಯಮಗಳು 2008 ರ ಕುರಿತಾಗಿ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಈ ಅರಣ್ಯ ಹಕ್ಕು ಕಾಯ್ದೆಯು ಗ್ರಾಮೀಣ, ಉಪವಿಭಾಗ ಮತ್ತು ಜಿಲ್ಲಾ ಮಟ್ಟದಲ್ಲಿ ಮೂರು ಹಂತಗಳಲ್ಲಿ ರಚಿಸಲಾಗಿದ್ದು, ಗ್ರಾಮೀಣ ಮಟ್ಟದಲ್ಲಿ ಗ್ರಾಮ ಸಭೆ, ಸದಸ್ಯರೊಂದಿಗೆ ಸಭೆ ನಡೆಸಿ ಫಲಾನುಭವಿಗಳನ್ನು ಗುರುತಿಸುವ ಮೂಲಕ ಅನುಮೋದನೆ ನೀಡಬೇಕು.

ಪರಿಶಿಷ್ಟ ಪಂಗಡ ಅಥವಾ ಇತರ ಸಾಂಪ್ರದಾಯಿಕ ಅರಣ್ಯವಾಸಿಗಳು ತಾವು ಅರಣ್ಯದಲ್ಲಿ ವಾಸಿಸುತ್ತಿರುವುದಕ್ಕೆ ಪುರಾವೆ ಒದಗಿಸಬೇಕು. ಇತರ ಸಾಂಪ್ರದಾಯಿಕ ಅರಣ್ಯವಾಸಿಗಳು ಮೂರು ತಲೆಮಾರುಗಳಿಂದ ಅಂದರೆ ಕನಿಷ್ಠ 75 ವರ್ಷಗಳು ಅರಣ್ಯದಲ್ಲಿ ವಾಸವಾಗಿರುವ ಬಗೆ ದಾಖಲೆಗಳ ಮೂಲಕ ಸಾಬೀತುಪಡಿಸಬೇಕು. ಅರಣ್ಯ ಹಕ್ಕು ಸಮಿತಿ ರಚನೆ ಮತ್ತು ನಿರ್ವಹಣೆಯಲ್ಲಿ ಹಳೆಯ ದಾಖಲೆಗಳನ್ನು ನವೀಕರಿಸುವುದು ಮತ್ತು ಸಮಿತಿಯ ಸದಸ್ಯರ ಸಹಿ ಅತಿ ಮುಖ್ಯವಾಗಿದೆ. ಅದರಲ್ಲೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಪ್ರಮುಖ ಪಾತ್ರ ಹೆಚ್ಚಿರುತ್ತದೆ. ಈ ದಿಸೆಯಲ್ಲಿ ಅಧಿಕಾರಿಗಳು ಅನುಮೋದನೆ ನೀಡುವ ವೇಳೆ ಯಾವುದೇ ಗೊಂದಲಗಳಿಗೊಳಗಾಗಿ ತಪ್ಪಾದ ಮಾಹಿತಿ ಒದಗಿಸಕೂಡದು. ಇದರಿಂದ ಅರ್ಹ ಫಲಾನುಭವಿಗಳು ತಮ್ಮ ಹಕ್ಕುಗಳಿಂದ ವಂಚಿತರಾಗಲಿದ್ದಾರೆ. ಅದಷ್ಟೇ ಅಲ್ಲದೇ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಹಿನ್ನಡೆಯಾಗುವ ಸಾಧ್ಯತೆ ಇರಲಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಪ್ರಾಥಮಿಕ ಹಂತದಲ್ಲಿಯೇ ಸೂಕ್ಷ್ಮವಾಗಿ ದಾಖಲೆಗಳ ಪರಿಶೀಲಿಸಿ ವರದಿ ನೀಡಬೇಕು ಎಂದು ಸಲಹೆ ನೀಡಿದರು.

ಈ ಅರಣ್ಯ ಹಕ್ಕುಗಳ ಮಾನ್ಯತೆಯಡಿ ರೈಲ್ವೆ ಹಳಿಗಳ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ ರಸ್ತೆಗಳಂತಹ ಯೋಜನೆಗಳು ಗಣಿಗಾರಿಕೆಯಂತಹ ನಿರ್ದಿಷ್ಟ ಭೂಪ್ರದೇಶಕ್ಕೆ ಸೀಮಿತವಾದ ಯೋಜನೆಗಳು ಸೇರಿವೆ. ಆದ್ದರಿಂದ ಅಧಿಕಾರಿಗಳು ದಾಖಲೆಗಳನ್ನು ಸಮರ್ಪಕವಾಗಿ ಪರಿಶೀಲಿಸಿ ಅನುಮೋದನೆ ನೀಡಬೇಕು. ಈ ಕಾಯ್ದೆಯ ಬಗ್ಗೆ ಮಾಹಿತಿ ನೀಡಲು ಒಡಿಸ್ಸಾದಿಂದ ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಲಾಗಿದೆ. ಪ್ರತಿಯೊಬ್ಬರೂ ಕಾರ್ಯಗಾರದ ಸದುಪಯೋಗ ಪಡೆದುಕೊಳ್ಳಬೇಕು. ತಮಗೆ ಏನೇ ಗೊಂದಲ, ಸಮಸ್ಯೆಗಳಿದ್ದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಓಡಿಸ್ಸಾದ ಗಿರಿ ರಾವ್, ಪ್ರಿಯಾಂಕಾ ಕಾಯ್ದೆಯ ಕುರಿತು ಉಪನ್ಯಾಸ ನೀಡಿದರು.

ಕಾರ್ಯಗಾರದಲ್ಲಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೆ.ರವಿಕುಮಾರ್, ಬಳ್ಳಾರಿ ಜಿಲ್ಲೆಯ ಪರಿಶಿಷ್ಟ ವರ್ಗಗಳ ಕಲ್ಯಾಣ ಕಲ್ಯಾಣಾಧಿಕಾರಿ ಶಾಶು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್, ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿಗಳಾದ ಗಿರಿ ರಾವ್, ಪ್ರಿಯಾಂಕ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.

Share This Article
Leave a Comment