ಹರಪನಹಳ್ಳಿ : ಹನ್ನೆರಡನೆ ಶತಮಾನದ ವಚನಕಾರ ಬಸವಣ್ಣ ರಚಿಸಿದ ವಚನಗಳು ಶಿಷ್ಟ ಸಾಹಿತ್ಯಕ್ಕೆ ಒತ್ತುಕೊಟ್ಟರೆ, ಅಂಬಿಗರ ಚೌಡಯ್ಯ ಅವರ ವಚನ ಸಾಹಿತ್ಯ ಗಾಂಭೀರ್ಯಕ್ಕೆ ಆಧ್ಯತೆ ನೀಡಿದೆ. ವಚನಗಳಲ್ಲಿರುವ ಸಂದೇಶಗಳು ಸರ್ವ ಕಾಲಕ್ಕೂ ಪ್ರಸ್ತುತವಾಗುತ್ತವೆ ಎಂದು ಹಿರಿಯ ವಕೀಲ ಕಣಿವಿಹಳ್ಳಿ ಮಂಜುನಾಥ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಬುಧವಾರ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯ ಹಾಗೂ ಮಹಾಯೋಗಿ ವೇಮನ ಜಯಂತಿಯಲ್ಲಿ ಅವರು ಉಪನ್ಯಾಸ ನೀಡಿದರು. ಶರಣರು ವಚನಗಳ ಚಾಟಿ ಏಟಿನ ಮೂಲಕ ಸಮಾಜದ ಅಂಕು ಡೊಂಕು ತಿದ್ದಿದ್ದಾರೆ. ನೂರಾರು ಶರಣರ, ಸಾವಿರಾರು ವಚನಗಳು ಸತ್ಯವನ್ನೆ ನುಡಿದಿವೆ. ನಿಷ್ಠುರ ಮಾತಿನ ಚಾಟಿಯು ಜನಮಾನಸದಲ್ಲಿ ಉಳಿಯುತ್ತದೆ ಎನ್ನುವುದಕ್ಕೆ ವಚನಗಳೇ ಸಾಕ್ಷಿಯಾಗಿವೆ ಎಂದರು.
ರೆಡ್ಡಿ ಸಮಾಜದ ತಾಲ್ಲೂಕು ಅಧ್ಯಕ್ಷ ಗಿರಿರಾಜ ರೆಡ್ಡಿ ಮಾತನಾಡಿ. ವಸ್ತುನಿಷ್ಠ ಯೋಚನೆಯಿಂದ ವಿಜ್ಞಾನಿಯಾದ, ಭಾವನಿಷ್ಟ ಯೋಚನೆಯಿಂದ ಕವಿಯಾದ, ಇವೆರಡನ್ನು ಮೀರಿದವರು ಸಮಾಜ ಸುಧಾರಣೆ ಮಾಡಿ ತಮ್ಮದೇ ಚಾಪು ಮೂಡಿಸಿದವರು. ಅಂತಹ ಮಹನೀಯರ ಪೈಕಿ ವೇಮನ ಯೋಗಿ ಶರಣರು ದಾರ್ಶನಿಕರು ಎಂದು ಹೇಳಿದರು.
ಉದ್ಘಾಟಿಸಿ ತಹಶೀಲ್ದಾರ ಬಿ.ವಿ.ಗಿರೀಶ್ ಬಾಬು ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಾಲ್ಲೂಕು ಪಂಚಾಯಿತಿ ಇಒ ವೈ.ಎಚ್.ಚಂದ್ರಶೇಖರ, ಗಂಗಾಧರ, ಪವಾಡಿ ಬಸವರಾಜ್, ಜೆ.ಕೊಟ್ರೇಶ್, ಪವಾಡಿ ದೇವೇಂದ್ರಪ್ಪ, ಬಿ.ವೈ.ಹಾಲೇಶ್, ಕೋಟಿ ಭೀಮಪ್ಪ, ದೇವರಾಜ್, ಅರಸನಾಳು ಬಸವರಾಜ್, ಚಿಗಟೇರಿ ಸುರೇಶ, ಸಿಂಗ್ರಿಹಳ್ಳಿ ನಿಂಗಪ್ಪ ಇದ್ದರು.
