ಜಿಲ್ಲಾಪಂಚಾಯಿತಿ ಸಿಇಒ ಜನರೊಂದಿಗೆ ದುರ್ವರ್ತನೆ ಆರೋಪ

Sirisuddi Kannada
1 Min Read

ಹರಪನಹಳ್ಳಿ : ವಿಜಯನಗರ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಮುಖ್ಯಾಧಿಕಾರಿ ಮೊಹಮ್ಮದ ಅಲಿ ಅಕ್ರಂ ಷಾ ಅವರು ಸಾರ್ವಜನಿಕರ ದುರಹಂಕಾರಿ ವರ್ತನೆ ತೋರುತ್ತಿದ್ದಾರೆ ಎಂದು ಭಾರತ ಕಮ್ಯುನಿಷ್ಟ ಪಕ್ಷ (ಎಂಎಲ್‍) ಮುಖಂಡರು ಆರೋಪಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ  ಸೋಮವಾರ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಸಿಪಿಐ ಎಂಎಲ್‍ ತಾಲ್ಲೂಕು ಕಾರ್ಯದರ್ಶಿ ಗುಳೇದಹಟ್ಟಿ ಸಂತೋಷ ಮಾತನಾಡಿ, ಸಾರ್ವಜನಿಕರು ಮನವಿ ಪತ್ರ ಹಿಡಿದುಕೊಂಡು ನ್ಯಾಯ ಕೇಳಲು  ಈಚೆಗೆ ಹರಪನಹಳ್ಳಿಯಿಂದ ಜಿಲ್ಲಾ ಪಂಚಾಯಿತಿ ಕಚೇರಿಗೆ ಹೋಗಿದ್ದಾಗ, ಕಾರ್ಮಿಕ ಮುಖಂಡರು ಎಂದು  ನೋಡದೆ, ಸಿಇಒ ಅಕ್ರಂ ಷಾ ಅವರು ಈಡಿಯಟ್‍ ಹೊರಗೆ ನಡೆ, ಇವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿದರು.

ಸಿಪಿಐ ಎಂಎಲ್‍ ಜಿಲ್ಲಾ ಕಾರ್ಯದರ್ಶಿ ಸಂದೇರ ಪರಶುರಾಮ್ ಮಾತನಾಡಿ, ಬಾಗಳಿ ಗ್ರಾಮ ಪಂಚಾಯಿತಿ ಕಸ ವಿಂಗಡಕರಾಗಿ ನೇಮಕಗೊಂಡಿದ್ದ ದಲಿತ ಮಹಿಳೆ ರೇಣುಕಮ್ಮ ಅವರಿಗೆ ಮೂರು ವರ್ಷದಿಂದ ಸಂಬಳ ಕೊಡದೇ ನಿರ್ಲಕ್ಷ್ಯ ಮಾಡಿದ್ದಾರೆ. ಈ ಬಗ್ಗೆ ಸಿಇಒ ಅವರ ಬಳಿ ಮಹಿಳೆ ಸಹಿತ ನ್ಯಾಯ ಕೇಳಲು ಹೋಗಿದ್ದಾಗ ಅಧಿಕಾರಿಯು ಜನಸ್ನೇಹಿಯಾಗಿ ಮಾತನಾಡದೇ, ದುರ್ವರ್ತನೆ ತೋರಿದ್ದಾರೆ ಎಂದರು. ಮುಖ್ಯಮಂತ್ರಿ ಅವರು, ವಿಜಯನಗರ ಜಿಲ್ಲೆಯಲ್ಲಿ ಎನ್‍ಆರ್‍ಎಂಎಲ್ ಯೋಜನೆ ಆಗಿರುವ ಹಗರಣ ತನಿಖೆಗೆ ಒಳಪಡಿಸಬೇಕು, ಸಿಇಒ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ದಲಿತ ಮಹಿಳೆ ರೇಣುಕಮ್ಮ ಮಾತನಾಡಿದರು, ಮುಖಂಡರಾದ ಹುಲಿಕಟ್ಟೆ ಮೈಲಪ್ಪ, ಮರಿಯಮ್ಮ, ಬಿ.ಎಸ್.ಪ್ರಕಾಶ್, ರಾಘವೇಂದ್ರ, ಖಲೀಂ ಇತರರಿದ್ದರು.

Share This Article
Leave a Comment