ಹರಪನಹಳ್ಳಿ : ಇಲ್ಲಿಯ ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳ ಜೊತೆ ಅನುಚಿತವಾಗಿ ವರ್ತಿಸುತ್ತಿರುವ ದಂತ ವೈದ್ಯನನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಶೃಂಗಾರತೋಟ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
ಬೆಳಿಗ್ಗೆ ಗ್ರಾಮದ ಮಹಿಳೆಯೊಬ್ಬರು ವೈದ್ಯರ ಬಳಿ ತಮ್ಮ ಬಾಲಕಿಯನ್ನು ತಪಾಸಣೆಗೆ ಕರೆದುಕೊಂಡು ಹೋಗಿದ್ದಾಗ ಅನುಚಿತವಾಗಿ ವರ್ತಿಸಿದ್ದಾರೆ. ಇದನ್ನು ಪ್ರಶ್ನಿಸಿದ ಅವರ ಮನೆಯವರ ಮೇಲೆ ಹಲ್ಲೆ ಯತ್ನ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ವೈದ್ಯ ನಾಗರಾಜ ನಾಯ್ಕ ಅವರು ಹಲವು ವರ್ಷದ ಹಿಂದೆ ಕೆಲಸ ಮಾಡಿದ್ದರು. ಈ ಹಿಂದೆ ಇದೇ ರೀತಿ ಅನುಚಿತವಾಗಿ ವರ್ತಿಸಿದ್ದರಿಂದ ಅಮಾನತುಗೊಂಡು ಹಡಗಲಿಗೆ ವರ್ಗಾವಣೆ ಯಾಗಿದ್ದರು. ಈಗಲೂ ಅದೇ ರೀತಿ ವರ್ತಿಸುತ್ತಿದ್ದು, ಆಸ್ಪತ್ರೆಗೆ ಬರುವ ರೋಗಿಗಳು ರೋಸಿ ಹೋಗಿದ್ದಾರೆ. ಇಂತಹ ವೈದ್ಯರನ್ನು ಅಮಾನತು ಮಾಡಿ, ತನಿಖೆ ಮಾಡಬೇಕು ಎಂದು ಗ್ರಾಮದ ಅಶೋಕ, ಮರಿಯಪ್ಪ ಅವರು ಒತ್ತಾಯಿಸಿದರು. ಮುಖಂಡರಾದ ಆಲೂರು ಶ್ರೀನಿವಾಸ, ಗಿರೀಶ, ಭರಮಪ್ಪ, ಮಂಜುನಾಥ, ಟಿ.ಉಚ್ಚಂಗೆಪ್ಪ, ಎಚ್.ನಾಗಪ್ಪ, ದುರುಗಪ್ಪ, ರಮೇಶ, ಸುರೇಶ ಇತರರಿದ್ದರು.
