ಹರಪನಹಳ್ಳಿ : ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿ ದಲಿತರು ಹೊಂದಿರುವ ಇತಿಹಾಸ ಪ್ರಸಿದ್ದ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಗ್ರಾಮದ ಇತಿಹಾಸ ಪ್ರಸಿದ್ದ ದಂಡಿನ ದುರುಗಮ್ಮ ದೇವಿ ಜಾತ್ರೆ ಡಿ.19ರ ಶುಕ್ರವಾರ ಆರಂಭಗೊಂಡು ಡಿ.21ರ ಭಾನುವಾರ ಮುಕ್ತಾಯಗೊಳ್ಳಲಿದೆ.
ದೇವಸ್ಥಾನಕ್ಕೆ ಸುಣ್ಣಬಣ್ಣ, ವಿದ್ಯುತ್ ದೀಪಾಲಂಕಾರದ ಸಿದ್ಧತೆಗಳು ಭರದಿಂದ ಸಾಗಿವೆ. ಜಾತ್ರೆಯು ಯಶಸ್ವಿಯಾಗಲು ಮುಂಜಾಗ್ರತವಾಗಿ ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಕರೆದಿದ್ದ ಶಾಂತಿಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ, ಹಲವು ನಿರ್ಣಯ ಕೈಗೊಳ್ಳಲಾಯಿತು. ಸಿಪಿಐ ಸಿಪಿಐ ಮಹಾಂತೇಶ್ ಜಿ.ಸಜ್ಜನ್ ಮಾತನಾಡಿ, ದಂಡಿನ ದುರುಗಮ್ಮ ದೇವಿ ಜಾತ್ರೆಯಲ್ಲಿ ಪ್ರಾಣಿಬಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಹಿತಕರ ಘಟನೆಗೆ ಅವಕಾಶ ಕೊಡದೇ, ಶಾಂತರೀತಿಯಿಂದ ಹಬ್ಬವನ್ನು ಆಚರಿಸಿ. ಜಾತ್ರೆ ನಿಮಿತ್ತ 70ಕ್ಕೂ ಪೊಲೀಸ್ ಸಿಬ್ಬಂದಿ ಜಾತ್ರೆಗೆ ನಿಯೋಜಿಸಲಾಗುವುದು ಎಂದು ಹೇಳಿದರು.
ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಕೆ.ಮಾರುತೇಶ್ ಮಾತನಾಡಿ, ಜಾತ್ರೆಗೆ ಬರುವ ಭಕ್ತರಿಗಾಗಿ ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಚತೆ, ವಿದ್ಯುತ್ ವ್ಯವಸ್ಥೆಗೆ ಮುಂಜಾಗ್ರತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಗ್ರಾಮದ ಮುಖಂಡ ಪ್ರಶಾಂತ ಪಾಟೀಲ್ ಮಾತನಾಡಿ, ಜಾತ್ರೆ ನಿಮಿತ್ತ ಎಲ್ಲೆಡೆಗೆ ಸ್ವಚ್ಚತೆಗೆ ಆಧ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಪಿಎಸ್ಐ ವಿಜಯಕೃಷ್ಣ, ದಲಿತ ಮುಖಂಡ ಪೂಜಾರ ಮರಿಯಪ್ಪ, ಕೆ.ಆನಂದಪ್ಪ, ಐ.ಸಲಾಂ ಸಾಬ್ ಮಾತನಾಡಿದರು. ಕಂದಾಯ ನಿರೀಕ್ಷಕ ನಾನ್ಯಸಾಹೇಬ್, ವೈದ್ಯ ಡಾ.ವೆಂಕಟೇಶ್, ಕಾರ್ಯದರ್ಶಿ ಶಿವಲೀಲಾ, ಮೈಲಾರಿ, ಆದಮ್ ಸಾಹೇಬ್, ಅಡ್ಡಿ ಚನ್ನವೀರಪ್ಪ, ಕೆ.ಮಹಾಂತೇಶ, ಎಂ.ಚಂದ್ರಪ್ಪ, ವೈ.ಕೊಟ್ರೇಶ್, ಬಿ.ಲಕ್ಷ್ಮಣ, ಅಬೀಬ್ ಸಾಬ್, ಎ.ಎಚ್.ಕೊಟ್ರೇಶ್, ಲಕ್ಷ್ಮಿ ನಾರಾಯಣ ಶೆಟ್ರು ಇದ್ದರು.
