ಹರಪನಹಳ್ಳಿ: ತಾಲ್ಲೂಕಿನಲ್ಲಿ ಹೋಬಳಿಗೊಂದು ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ತಹಶೀಲ್ದಾರ ಬಿ.ವಿ.ಗಿರೀಶ್ ಬಾಬು ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಎಐಕೆಎಸ್ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್ ಮಾತನಾಡಿ, ತಾಲ್ಲೂಕಿನಲ್ಲಿ 1,80,396 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಈ ಪೈಕಿ 40 ಸಾವಿರಕ್ಕೂ ಅಧಿಕ ರೈತರು ಈಗಾಗಲೇ ಬೆಳೆ ಕಟಾವು ಮಾಡಿದ್ದು, ದಾಸ್ತಾನ ಮಾಡಿಟ್ಟುಕೊಳ್ಳಲು ಶಕ್ತಿ, ಅನುಕೂಲವಿಲ್ಲದಾಗಿದೆ ಎಂದರು.ಹಾಗಾಗಿ ತಾಲ್ಲೂಕಿನ ಹರಪನಹಳ್ಳಿ, ಚಿಗಟೇರಿ, ಅರಸೀಕೆರೆ ಹಾಗೂ ತೆಲಿಗಿ ಹೋಬಳಿಗೊಂಡು ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿದರು.
ಬೇಡಿಕೆಗಳು : ಅತಿವೃಷ್ಟಿಯಿಂದ ಹಾನಿಯಾಗಿರುವ ಬೆಳೆಗಳಿಗೆ ಬೆಳೆಹಾನಿ ಪರಿಹಾರ ನೀಡಬೇಕು. ರೈತರ ಬೆಳೆ ಸಾಲ ಮನ್ನಾ ಮಾಡಬೇಕು. 16839 ರೈತರ ಬಗರ್ ಹುಕ್ಕುಂ ಸಮಸ್ಯೆ ಪರಿಹಾರ ಮಾಡಬೇಕು. ಹೊಸಕೋಟೆಯ ವಿವಿದೋದ್ದೇಶ ಕೃಷಿ ಪತ್ತಿನ ಸಹಕಾರ ಸಂಘದ ಠೇವಣಿದಾರರಿಗೆ ಹಣ ಕೊಡಿಸಬೇಕು, ವಂಚನೆ ಮಾಡಿದ ಕಾರ್ಯನಿರ್ವಾಹಕ ಅಧಿಕಾರಿ ಮೇಲೆ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ.ಸಂತೋಷ್, ತಾಲ್ಲೂಕು ಕಾರ್ಯದರ್ಶಿ ರಮೇಶ್ ನಾಯ್ಕ, ಹರಿಯಮ್ಮನಹಳ್ಳಿಬಸವರಾಜ್, ಗರಿಗುಡಿಹಳ್ಳಿ ಶಿವರಾಮ್, ಹನುಮಂತನಾಯ್ಕ, ಡಿ.ಎಚ್.ಅರುಣ್, ಪ್ರಭುಗೌಡ, ಮತ್ತಿಹಳ್ಳಿ ತಿಂದಪ್ಪ, ಭರಮಪ್ಪ, ಎಚ್.ಹಾಲಪ್ಪ, ಎ.ಬಿ.ನಾಗರಾಜ ಗೌಡ, ವಿಶಾಲಾಕ್ಷಮ್ಮ, ಅರಸೀಕೆರೆ ರಂಗಪ್ಪ, ದುರುಗಪ್ಪ, ಎಂ.ಬಸವರಾಜ್, ಬೊಮ್ಮಲಿಂಗಪ್ಪ, ಮಾದಿಹಳ್ಳಿ ನಿಂಗಪ್ಪ ಇದ್ದರು.
