ಕಣಿವಿಹಳ್ಳಿ : ದಲಿತ ಸಮುದಾಯಗಳ ಹೋರಾಟ

Sirisuddi Kannada
2 Min Read

ಹರಪನಹಳ್ಳಿ : ತಾಲ್ಲೂಕಿನ ಕಣಿವಿಹಳ್ಳಿ ಗ್ರಾಮದಲ್ಲಿ 220 ಕೆ.ವಿ. ಒಂಟಿ ವಿದ್ಯುತ್ ಗೋಪುರವನ್ನು ಸ್ಥಳಾಂತರಿಸಬೇಕು ಹಾಗೂ ಹೊಸ ಗೋಪುರ ನಿರ್ಮಾಣಕ್ಕೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿ ಗ್ರಾಮಸ್ಥರು ಬುಧವಾರ ತಹಶೀಲ್ದಾರ ಬಿ.ವಿ.ಗಿರೀಶ್ ಬಾಬು ಅವರಿಗೆ ಒತ್ತಾಯಿಸಿದರು.

ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ಆಗಮಿಸಿದ್ದ ಗ್ರಾಮದ ಪರಿಶಿಷ್ಟ ಸಮುದಾಯದವರು ಹೊಸ ಗೋಪುರ ನಿರ್ಮಾಣಕ್ಕೆ ಯಾವುದೇ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು. ದಲಿತ ಮುಖಂಡ ಕಣಿವಿಹಳ್ಳಿ ಮಂಜುನಾಥ ಮಾತನಾಡಿ, ಕಣಿವಿಹಳ್ಳಿಯಲ್ಲಿ ಪರಿಶಿಷ್ಟ ಸಮುದಾಯದ 60ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. 1978ನೇ ಇಸ್ವಿಹಳ್ಳಿ ಕೊಪ್ಪಳದ ಲಿಂಗಾಪುರದಿಂದ ಹರಿಹರದ ಗುತ್ತೂರು ವಿದ್ಯುತ್ ಸ್ವೀಕರಣ ಕೇಂದ್ರಕ್ಕೆ 220 ಕೆ.ವಿ. ಹೈ ವೋಲ್ಟೋಜ್ ವಿದ್ಯುತ್ ತಂತಿ ನಿರ್ಮಿಸಲಾಗಿದೆ. ಆದರೆ ನಮ್ಮ ಗ್ರಾಮದಲ್ಲಿ ಸರ್ಕಾರ ನಮಗಾಗಿ ವಸತಿ ನಿರ್ಮಾಣಕ್ಕಾಗಿ ಸರ್ವೆ ನಂಬರ್ 106.ಬಿರಲ್ಲಿ 1 ಎಕರೆ 57 ಸೆಂಟ್ಸ್ ಭೂಮಿಯನ್ನು ಖಾಸಗಿವ್ಯಕ್ತಿಯಿಂದ ಸರ್ಕಾರವು ಸ್ವಾಧೀನಪಡಿಸಿಕೊಂಡು ನಮ್ಮ ಕಾಲೊನಿಯ 60 ದಲಿತ ಕುಟುಂಬಗಳಿಗೆ ಮನೆ ಕಟ್ಟಿಕೊಳ್ಳಲು ಹಕ್ಕುಪತ್ರ ಕೊಟ್ಟಿದೆ ಎಂದರು.

ಇದನ್ನು ಲೆಕ್ಕಿಸದ ಕೆಪಿಟಿಸಿಎಲ್‍ ಅಧಿಕಾರಿಗಳು ಭೂ ಪರಿವರ್ತನೆ ಮಾಡಿಕೊಂಡು, ಅಲ್ಲಿ ವಾಸ ಮಾಡುತ್ತಿರುವ ದಲಿತ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಹೊರಟಿದ್ದಾರೆ. ಹೈ  ವೋಲ್ಟೆಜ್‍ ವಿದ್ಯುತ್ ಪ್ರಸಾರದ ಪರಿಣಾಮ ಮನೆಯ ಟಿ.ವಿ. ಎಲೆಕ್ಟ್ರಿಕಲ್ ಬಲ್ಬ್‍ ಗಳು ಸುಟ್ಟು ಹೋಗುತ್ತಿವೆ. ಇದು ಪ್ರತಿ ವರ್ಷ ನಿರಂತರವಾಗಿ ನಡೆದುಕೊಂಡು ಬಂದಿರುತ್ತದೆ. ಇದು ಗ್ರಾಮದ 100ಕ್ಕೂ ಹೆಚ್ಚು ದಲಿತರ ಜೀವದ ಜೊತೆ ಚೆಲ್ಲಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಪ್ರಕರಣ ನ್ಯಾಯಾಲಯದಲ್ಲಿದೆ, ಆದರೂ ಅಧಿಕಾರಿಗಳು ಆದೇಶಕ್ಕೂ ಮುನ್ನವೇ ಕಾಮಗಾರಿ ಮಾಡಲು ಹೊರಟಿರುವುದನ್ನು ನಿಲ್ಲಿಸಬೇಕು. ಈ ಬಗ್ಗೆ ಜಾರಿ ನಿರ್ದೇಶನಾಲಯ, ಮಾನವ ಹಕ್ಕುಗಳ ಆಯೋಗ, ರಾಜ್ಯ ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟು ಆಯೋಗಕ್ಕೂ ದೂರು ಸಲ್ಲಿಸಲಾಗಿದೆ. ದಲಿತರಿಗೆ ನ್ಯಾಯ ಕೊಡಬೇಕು, ವಿದ್ಯುತ್ ಗೋಪುರಗಳನ್ನು ಬೇರೆಡೆ ಸ್ಥಳಾಂತರಿಸುವ ತನಕ, ನಮ್ಮ ಕಾನೂನು ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಇಟ್ಟಿಗಿ ಸುಮಾ, ಹುಚ್ಚಪ್ಪ, ಕಾಳಪ್ಪ, ಹನುಮಪ್ಪ, ಗೋಣಿಸ್ವಾಮಿ, ಮಲ್ಲಿಕಾರ್ಜುನ, ಜುಂಜಪ್ಪ, ಅನ್ನಪೂರ್ಣ, ಎಸ್.ಕವಿತಾ, ನಾಗರಾಜ್, ಮಮತ, ಶ್ರವಣಕುಮಾರ, ಹನುಮಂತಪ್ಪ, ಎಸ್.ನಿಂಗಪ್ಪ, ಮಂಜುನಾಥ, ಯರಿಯಮ್ಮ ಇದ್ದರು.

Share This Article
Leave a Comment