ಹರಪನಹಳ್ಳಿ : ತಾಲ್ಲೂಕಿನ ಕೆರೆಗುಡಿಹಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಅಖಿಲ ಭಾರತ ಕಿಸಾನ್ ಸಭಾದ 6ನೇ ತಾಲ್ಲೂಕು ಸಮ್ಮೇಳನ ಸೋಮವಾರ ಯಶಸ್ವಿಯಾಗಿ ಜರುಗಿತು. ಸಮ್ಮೇಳನದಲ್ಲಿ ರೈತರ ಸಮಸ್ಯೆಗಳು, ಬಗರ್ ಹುಕುಂ ಸಾಗುವಳಿದಾರರ ಹಕ್ಕುಗಳು ಹಾಗೂ ಮುಂದಿನ ಹೋರಾಟಗಳ ರೂಪುರೇಷೆಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು.
ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಹೆಚ್.ಎಂ. ಸಂತೋಷ್ ಮಾತನಾಡಿ, ಸಮ್ಮೇಳನಗಳು ಕೇವಲ ಸಾಂಕೇತಿಕವಾಗಿರದೆ ರೈತರು, ಬಡವರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ದೀನ ದಲಿತರ ಕ್ರಾಂತಿಕಾರಿ ಧ್ವನಿಯಾಗಬೇಕು ಎಂದರು.
ಉದ್ಘಾಟಿಸಿದ ಸಿಪಿಐ ತಾಲ್ಲೂಕು ಕಾರ್ಯದರ್ಶಿ ರಮೇಶ್ ನಾಯ್ಕ್ ಮಾತನಾಡಿ, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ, ನೀರಾವರಿ ಯೋಜನೆಗಳು ಜಾರಿಯಾಗಿಲ್ಲ ಮತ್ತು ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸದ ಸರ್ಕಾರದ ನಿರ್ಲಕ್ಷ್ಯ ವಿರುದ್ದ ಜನಜಾಗೃತಿ ಮೂಡಿಸಿ, ಹಂತ ಹಂತವಾಗಿ ಹೋರಾಟ ರೂಪಿಸುವ ಅಗತ್ಯವಿದೆ ಎಂದರು.
ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಕೆರೆಗುಡಿಹಳ್ಳಿ ಹಾಲೇಶ್ ಮಾತನಾಡಿ, ‘1936ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಹುಟ್ಟಿಕೊಂಡ ಕಿಸಾನ್ ಸಭಾ, ‘ಉಳುವವನೇ ಭೂಮಿಯ ಒಡೆಯ’ ಎಂಬ ಧ್ಯೇಯದೊಂದಿಗೆ ಕಳೆದ ಮೂರು ದಶಕಗಳಿಂದ ಬೆಂಬಲ ಬೆಲೆ, ಪರಿಹಾರ ಮತ್ತು ಭೂಸ್ವಾಧೀನದ ವಿರುದ್ಧ ಸತತ ಹೋರಾಟ ಮಾಡಿಕೊಂಡು ಬರುತ್ತಿದೆ’ ಎಂದರು. ಇದೇ ವೇಳೆ ಕಾರ್ಮಿಕ, ರೈತ, ದಲಿತಪರ ಸಂಘಟನೆಗಳ ಮುಖಂಡರನ್ನು ಸನ್ಮಾನಿಸಲಾಯಿತು. ಇಪ್ಟಾ ಕಲಾವಿದ ಎ.ಡಿ.ದ್ವಾರಕೀಶ್ ಕ್ರಾಂತಿಗೀತೆ ಹಾಡಿದರು.
ಕಾರ್ಮಿಕ ಮುಖಂಡ ಹೊಸಹಳ್ಳಿ ಮಲ್ಲೇಶ್, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೂದಿಹಾಳು ಸಿದ್ದಣ್ಣ, ಡಿಎಸ್ಎಸ್ ಮುಖಂಡ ಕಬ್ಬಳ್ಳಿ ಮೈಲಪ್ಪ ಮಾತನಾಡಿದರು. ಮುಖಂಡರಾದ ಬಳಿಗನೂರು ಕೊಟ್ರೇಶ್, ಹೆಚ್. ಹಾಲಪ್ಪ, ಎ.ಬಿ. ನಾಗರಾಜ್ ಗೌಡ, ಟಿ. ಬಸಮ್ಮ, ವಿಶಾಲಮ್ಮ, ದೇವಿಕಾ, ಕರಿಬಸಮ್ಮ ಇದ್ದರು.
ಎಐಕೆಎಸ್ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ
- ಗೌರವಾಧ್ಯಕ್ಷರು: ರಾಗಿ ಮಸಲವಾಡದ ಹನುಮಂತಪ್ಪ
- ಅಧ್ಯಕ್ಷರು: ಹನುಮಂತ ನಾಯ್ಕ್
- ಉಪಾಧ್ಯಕ್ಷರು: ಬೊಮ್ಮಲಿಂಗಪ್ಪ
- ಪ್ರಧಾನ ಕಾರ್ಯದರ್ಶಿ: ಶಿವರಾಮ್
- ಸಹ ಕಾರ್ಯದರ್ಶಿ: ಹರಿಯಮ್ಮನಹಳ್ಳಿ ಬಸವರಾಜ್
- ತಾಲೂಕು ಸಮಿತಿ ಸದಸ್ಯರು: ಮತ್ತಿಹಳ್ಳಿ ಭರಮಪ್ಪ, ಶಿವಕುಮಾರ್, ಚಿದಾನಂದಪ್ಪ, ಬೊಮ್ಮಪ್ಪ, ಬಸವರಾಜ್.
- ಗಣ್ಯರ ಉಪಸ್ಥಿತಿ: ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೂದಿಹಾಳು ಸಿದ್ದಣ್ಣ, ಡಿಎಸ್ಎಸ್ ಮುಖಂಡ ಕಬ್ಬಳ್ಳಿ ಮೈಲಪ್ಪ, ಹೊಸಹಳ್ಳಿ ಮಲ್ಲೇಶ್ ಮಾತನಾಡಿದರು. ಮುಖಂಡರಾದ ಬೊಮ್ಮಲಿಂಗಪ್ಪ, ಹನುಮಂತನಾಯ್ಕ್, ಶಿವರಾಮ್, ಬಳಿಗನೂರು ಕೊಟ್ರೇಶ್, ಹೆಚ್. ಹಾಲಪ್ಪ, ಎ.ಬಿ. ನಾಗರಾಜ್ ಗೌಡ, ಟಿ. ಬಸಮ್ಮ, ವಿಶಾಲಮ್ಮ, ದೇವಿಕಾ, ಕರಿಬಸಮ್ಮ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದ್ವಾರಕೀಶ್ ಅವರು ಕ್ರಾಂತಿಗೀತೆಗಳನ್ನು ಹಾಡುವ ಮೂಲಕ ಗಮನ ಸೆಳೆದರು.
