ಹರಪನಹಳ್ಳಿ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಕುರಿತಂತೆ ಧಾರವಾಡ ಹೈಕೋರ್ಟ್ ಮಹತ್ವದ ಆದೇಶ ನೀಡಿದ್ದು, ಮುಂದಿನ ಒಂದು ತಿಂಗಳೊಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದೆ.
ಏನಿದು ಪ್ರಕರಣ ?
2020-25ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಡಳಿತ ಮಂಡಳಿಯ ಅವಧಿಯು 2025ರ ಡಿಸೆಂಬರ್ ಅಂತ್ಯಕ್ಕೆ ಮುಕ್ತಾಯವಾಗಿತ್ತು. ಆದರೆ, ಚುನಾವಣೆ ನಡೆಸದೆ ಅನಧಿಕೃತವಾಗಿ ಅಧಿಕಾರ ಮುಂದುವರಿಸಲು ಹಾಗೂ ಸಂಘದ ಜವಾಬ್ದಾರಿಗಳನ್ನು ನಿಭಾಯಿಸಲು ಹಳೆಯ ಪದಾಧಿಕಾರಿಗಳು ಯತ್ನಿಸುತ್ತಿದ್ದರು. ಇದನ್ನು ಪ್ರಶ್ನಿಸಿ ಕಂಪ್ಲಿ ತಾಲ್ಲೂಕಿನ ಶಿಕ್ಷಕ ನಾಗನಗೌಡ, ಹರಪನಹಳ್ಳಿ ತಾಲ್ಲೂಕಿನ ಶಿಕ್ಷಕರಾದ ಷರೀಫ್ ಮಕರಬ್ಬಿ, ಮಂಜುನಾಥ ಪೂಜಾರ್ ಮತ್ತು ಮರಿಯಪ್ಪ ಅವರು ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅಧಿಕಾರಿಗಳ ವಾಗ್ದಾನ:
ಶಿಕ್ಷಕರು ಸಲ್ಲಿಸಿದ್ದ ಈ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಬೆಂಗಳೂರಿನ ಸಹಕಾರ ಸಂಘಗಳ ಉಪನಿಬಂಧಕರಿಗೆ (DR) ಖುದ್ದು ಹಾಜರಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಮಾರ್ಚ್ 26, 2026 ರಂದು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾದ ಅಧಿಕಾರಿಗಳು, “ಇಂದಿನಿಂದ ಕೇವಲ ಒಂದು ತಿಂಗಳ ಒಳಗಾಗಿ ಚುನಾವಣೆ ನಡೆಸಲಾಗುವುದು” ಎಂದು ನ್ಯಾಯಾಧೀಶರ ಮುಂದೆ ವಾಗ್ದಾನ ನೀಡಿದ್ದಾರೆ. ಅಧಿಕಾರಿಗಳ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಕೋರ್ಟ್, ಮುಂದಿನ ವಿಚಾರಣೆಯನ್ನು ಒಂದು ತಿಂಗಳ ನಂತರ ಕೈಗೆತ್ತಿಕೊಳ್ಳುವುದಾಗಿ ಆದೇಶಿಸಿದೆ.
ಹೋರಾಟಗಾರರ ಪ್ರತಿಕ್ರಿಯೆ:
- ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಷರೀಫ್ ಮಕರಬ್ಬಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಘದ ಅವಧಿ ಮುಗಿದ ಕೂಡಲೇ ಚುನಾವಣೆ ನಡೆಸುವುದು ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಕರ್ತವ್ಯ. ಐದು ವರ್ಷದ ನಂತರವೂ ಅಧಿಕಾರ ವಿಸ್ತರಿಸಿಕೊಳ್ಳುವ ಯತ್ನ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ’ ಎಂದರು.
- ಮಂಜುನಾಥ್ ಪೂಜಾರ್ ಮಾತನಾಡಿ, “ಇದು ಶಿಕ್ಷಕರ ಸತ್ಯ ಮತ್ತು ಪ್ರಾಮಾಣಿಕ ಹೋರಾಟಕ್ಕೆ ಸಂದ ಜಯ.”
- ಶಿಕ್ಷಕ ನಾಗನಗೌಡ ಮಾತನಾಡಿ, ” ಹೈಕೋರ್ಟ್ ಆದೇಶದನ್ವಯ ಸಂಘದಲ್ಲಿ ಅನಧಿಕೃತವಾಗಿ ಅಧಿಕಾರ ಚಲಾಯಿಸುತ್ತಿರುವವರು ತಕ್ಷಣವೇ ತಮ್ಮ ಹುದ್ದೆಗಳಿಂದ ನಿರ್ಗಮಿಸಬೇಕು. ಹಾಗೂ ಪಾರದರ್ಶಕ ಚುನಾವಣೆಗೆ ಅವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
