ಅರಣ್ಯ ರಕ್ಷಣೆಗೆ ಜನರಲ್ಲಿ ಕಾನೂನಿನ ಅರಿವು ಅಗತ್ಯ

newbietechy.blog@gmail.com
3 Min Read

ಚಿತ್ರದುರ್ಗ: ಚಿತ್ರದುರ್ಗದ ಸುತ್ತಮುತ್ತಲಿರುವ ಅರಣ್ಯವನ್ನು ರಕ್ಷಣೆ ಮಾಡಲು ಜನರಲ್ಲಿ ಕಾನೂನಿನ ಅರಿವು ಅಗತ್ಯ, ಅರಣ್ಯ ಸಂಪತ್ತನ್ನ ಲೂಟಿ ಮಾಡುವುದು, ಒತ್ತುವರಿ ಮಾಡುವುದು, ಪ್ರಾಣಿ ಪಕ್ಷಿಗಳನ್ನ ಕೊಲ್ಲುವುದು ನಾವೇ ಮಾಡಿಕೊಂಡ ಕಾನೂನಿನ ಉಲ್ಲಂಘನೆಯಾಗುತ್ತದೆ, ಪರಿಸರ ನಾಶ ಕಾನೂನಿನ ವಿರೋಧವಾಗಿದ್ದು, ಜನರು ಇದರ ಬಗ್ಗೆ ಅರಿವುಂಟು ಮಾಡಿಕೊಂಡು, ಇರುವ ಒಂದಿಷ್ಟು ಕಾಡನ್ನ, ವನ್ಯಜೀವಿಗಳನ್ನ ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಅಪರಾಧ ಶಾಸ್ತ್ರದ ನಿವೃತ್ತ ಪ್ರಾಧ್ಯಾಪಕರಾದ ಡಾ ನಟರಾಜ್ ರವರು ಕರೆ ನೀಡಿದರು.

ಅವರು ಚಿತ್ರದುರ್ಗ ನಗರದ ಎಂಟು ಕಿಲೋಮೀಟರ್ ದೂರದಲ್ಲಿರುವ ಆಡು ಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ವನ್ಯಜೀವಿಗಳ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಹುಲಿ, ಚಿರತೆಯ, ಆನೆಯ ಅಂಗಾಂಗಗಳನ್ನು ಕತ್ತರಿಸಿ, ಅವುಗಳ ಉಗುರನ್ನ, ದಂತವನ್ನು, ಚರ್ಮವನ್ನ ಬಳಕೆ ಮಾಡುತ್ತಿದ್ದಂತ ಸಂದರ್ಭಗಳು ಈಗ ಇಲ್ಲವಾಗಿದೆ, ಈಗ ಕಾನೂನಾತ್ಮಕವಾಗಿ ಅಂತಹ ಕಾರ್ಯಗಳು ಅಪರಾಧವಾಗುತ್ತವೆ, ಪ್ರಾಣಿ ಪಕ್ಷಿಗಳ ಚರ್ಮದಿಂದ ಮಾಡಿದಂತಹ ಕೈ ಚೀಲಗಳನ್ನ ನಿಷೇಧಿಸಲ್ಪಟ್ಟಿದ್ದರು ಸಹ ಕೆಲವೊಮ್ಮೆ ಸಿನಿಮಾ ತಾರೆಯರು ಅವುಗಳನ್ನು ಧರಿಸಿ ಪ್ರದರ್ಶನಕ್ಕೆ ಬರುವುದು ನಿಜಕ್ಕೂ ಶೋಚನೀಯ ಎಂದರು.

ಶ್ರೀಮಂತರ ಮನೆಯಲ್ಲಿ ಅನ್ಯಮಾರ್ಗದಿಂದ ಹಣ ಸಂಪಾದನೆ ಮಾಡಿದಂತವರನ್ನ ಬಂಧಿಸುವ ಸಂದರ್ಭದಲ್ಲಿ, ಮನೆಗಳಲ್ಲಿರುವ ಕಾಡಿನ ಸಂಪತ್ತುಗಳನ್ನು ಸಹ ವಶಪಡಿಸಿಕೊಳ್ಳುವಂತಹ ಕಾನೂನು ಬರಬೇಕಾಗಿದೆ, ಶ್ರೀಮಂತರ ಮನೆಗಳಲ್ಲಿ ಕಾಡುಪ್ರಾಣಿಗಳ ಕೊಂಬುಗಳನ್ನ, ಚರ್ಮದ ವಸ್ತುಗಳನ್ನ ಸಂಗ್ರಹಿಸಿ ಇಟ್ಟುಕೊಂಡಿರುವುದು ಬೆಳಕಿಗೆ ತಂದು, ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಪಶು ವೈದ್ಯರಾದ ಡಾ. ಹರೀಶ್ ರವರು ಮಾತನಾಡುತ್ತಾ ಪ್ರಾಣಿ ಪಕ್ಷಿಗಳನ್ನ ಪರಿಸರ ಮಾಲಿನ್ಯದಿಂದ ರಕ್ಷಿಸಬೇಕಾಗಿದೆ, ಹಸುವಿನ ಹೊಟ್ಟೆಯಲ್ಲಿ ಹತ್ತರಿಂದ ಹದಿನೈದು ಕೆಜಿ ಪ್ಲಾಸ್ಟಿಕ್ ದೊರಕುತ್ತಿದ್ದು, ಅವುಗಳು ಸಾವನ್ನಪ್ಪುತ್ತಿರುವುದು ಗಂಡಾಂತಕಾರಿಯಾಗಿದೆ, ಹಾವುಗಳು ಸಹ ಪ್ಲಾಸ್ಟಿಕ್ ಸೇವನೆ ಮಾಡುತ್ತಿದ್ದು, ರೇಬಿಸ್ ಕಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಪ್ರಾಣಿಗಳನ್ನ ಸಾಕುವವರು, ಪ್ರಾಣಿಗಳಿಗೂ ಮತ್ತು ಸ್ವತಃ ತಾವುಗಳು ಸಹ ರೇಬೀಸ್ ಲಸಿಕೆಯನ್ನು ಹಾಕಿಸಿಕೊಂಡು, ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು, ಬೀದಿ ನಾಯಿಗಳನ್ನ ನಿಯಂತ್ರಿಸಲು ಹಲವಾರು ಯೋಜನೆಗಳಿದ್ದು, ಯಾವುದೇ ಪ್ರಾಣಿಗಳು ಮನುಷ್ಯನನ್ನ ಕಚ್ಚಿದರೆ ರೇಬೀಸ್ ಬರುವ ಸಂಭವಗಳಿದ್ದು, ಅದರ ಬಗ್ಗೆ ಎಚ್ಚರಿಕೆವಹಿಸಿ, ಪ್ರತಿಯೊಬ್ಬರು ಲಸಿಕೆ ತೆಗೆದುಕೊಳ್ಳುವುದರ ಬಗ್ಗೆ ಜಾಗೃತರಾಗಬೇಕು ಎಂದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ ಎಚ್ ಕೆ ಎಸ್ ಸ್ವಾಮಿಯವರು ಮಾತೃಭಾಷೆಯನ್ನು ತಿರಸ್ಕರಿಸಿದ್ದರಿಂದ ಜನರಿಗೆ ಸಾಮಾನ್ಯ ಜ್ಞಾನದ, ಪರಿಸರದ ಚಿಂತನೆಗಳು ಮೂಡದೆ, ಕಾಡುಗಳ ನಾಶಕ್ಕೂ ಸಹ ಕಾರಣವಾಗುತ್ತಿದೆ, ಗ್ರಾಮೀಣ ಉದ್ಯೋಗಗಳನ್ನು ರಕ್ಷಿಸಿಕೊಂಡು, ಕಾಡಿನ ನಾಶವನ್ನು ತಡೆಯಬಹುದು, ಚರಕ ಸ್ಥಳೀಯ ಉತ್ಪಾದನೆಗೆ ಅನುಕೂಲಕರವಾಗಿದ್ದು, ಕಾಡಿನ ವಸ್ತುಗಳನ್ನೇ ಬಳಸಿ ಗ್ರಾಮೀಣ ಉದ್ಯೋಗಗಳು ಬೆಳೆದುಕೊಂಡಿದ್ದವು, ದೇವರ ಹೆಸರಲ್ಲಿ ಕಾಡುಗಳನ್ನು ರಕ್ಷಣೆ ಮಾಡಿಕೊಂಡಂತ ದೇಶ, ಇಂದು ಕಾಡನ್ನ ನಾಶ ಮಾಡಲು ಮುಂದಾಗುತ್ತಿರುವುದು ಶೋಚನೀಯ ಎಂದರು.

ರಘುನಂದನ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ನೀತುರವರು ಮಾತನಾಡುತ್ತಾ ವೈದ್ಯಕೀಯ ರಂಗದಲ್ಲೂ ಸಹ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಪರಿಸರ ವಿರೋಧಿ ಜೀವನದಿಂದ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಜನರು ಪರಿಸರ ಸ್ನೇಹಿ ಜೀವನ ಮಾಡಿ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಇಂತಹ ಕಾಡುಗಳಿಗೆ ಬಂದು, ವಿಶ್ರಾಂತಿ ಪಡೆದು, ಮಾನಸಿಕ ನೆಮ್ಮದಿಯನ್ನು ಸಹ ಪಡೆಯಬಹುದು ಎಂದರು.

ಸ್ನೇಕ್ ಶಿವು ಮಾತನಾಡುತ್ತಾ ಹಾವುಗಳನ್ನ ರಕ್ಷಣೆಗೆ ಜನರು ಒಂದಾಗಬೇಕು, ವಿಷವಿರುವ ಹಾವುಗಳನ್ನ ರಕ್ಷಿಸಿ, ಕಾಡಿಗೆ ಬಿಡುವ ಏರ್ಪಾಡು ಮಾಡಬೇಕಾಗಿದೆ, ಹಾವಿನ ಬಗ್ಗೆ ಇರುವ ಭಯವನ್ನು ನಿವಾರಿಸಿಕೊಂಡು, ಅದರ ಜೊತೆಗೂ ನಾವು ಸ್ನೇಹದಿಂದ ಬದುಕುವುದನ್ನು ರೂಢಿ ಮಾಡಿಕೊಳ್ಳಬೇಕಾಗಿದೆ ಎಂದರು.

ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿಗಳಾದ ಶ್ರೀಮತಿ ಅಕ್ಷತಾ ಐ.ಬಿ. ಮಾತನಾಡುತ್ತಾ ಅರಣ್ಯ ಇಲಾಖೆ ಸಾಕಷ್ಟು ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು ಸಹ, ಜನರು ಇನ್ನೂ ಹೆಚ್ಚಿನ ಮಟ್ಟದಲ್ಲಿ ವನ್ಯಜೀವಿ ಸಪ್ತಾಹಗಳಲ್ಲಿ ಭಾಗವಹಿಸಬೇಕು, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಧೈರ್ಯ ತಾಳಬೇಕು, ಕಾಡಿಗೆ ಬಂದ ಮೇಲೆ ಪ್ರಾಣಿಗಳನ್ನು ವೀಕ್ಷಣೆ ಮಾಡಿ ಅವುಗಳ ರಕ್ಷಣೆಯ ಬಗ್ಗೆ ಮುಂದಾಗಬೇಕು. ಕಾಡುಪ್ರಾಣಿಗಳ ಅಕ್ರಮಣವಾದಾಗ ಅರಣ್ಯ ಇಲಾಖೆ ಜೊತೆ ಸಹಕರಿಸಿ, ಅವುಗಳನ್ನು ನಿಯಂತ್ರಿಸಲು ಪ್ರಯತ್ನಿಸಬೇಕು, ನಗರಗಳು ವಿಸ್ತಾರವಾಗುತ್ತಿರುವುದರಿಂದ ಕಾಡುಪ್ರಾಣಿಗಳಿಗೆ ಆಹಾರದ ಸಮಸ್ಯೆಯಾಗಿ ಜನವಸತಿ ಕಡೆ ಬಂದಾಗ, ಜನರು ಅವುಗಳನ್ನು ಸಮಾನದಿಂದ ಕಾಡಿಗೆ ತಂದು ಇರಿಸಲು ಅವಕಾಶ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಶ್ರೀ ವೆಂಕಟೇಶ ಭೀಮಣ್ಣ ಪಡೆದಳ್ಳಿ, ಗಸ್ತು ಅರಣ್ಯ ಪಾಲಕರಾದ ಸಂತೋಷ್ ಮಲ್ಲಾಪುರ್,
ಜೀವಶಾಸ್ತ್ರಜ್ಞೆ ಗಾನವಿ, ರಘುನಂದನ್ ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

Share This Article
Leave a Comment