ಹರಪನಹಳ್ಳಿ : ಕನ್ನಡ ಎಂಬ ಮೂರಕ್ಷರದಲ್ಲಿ ವೈಭವದ ಸೊಗಡು ಅಡಗಿದೆ ಎಂದು ಹೊಸಪೇಟೆಯ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ ಹೇಳಿದರು.
ತಾಲೂಕಿನ ತೆಲಿಗಿ ಗ್ರಾಮದ ಆಲಗಿಲವಾಡ ಪಾಟೀಲ್ ವಿರೂಪಾಕ್ಷಪ್ಪ ಸರ್ಕಾರಿ ಪ್ರೌಡಶಾಲೆ ಆವರಣದಲ್ಲಿ ಕನ್ನಡ ಮನಸುಗಳ ಒಕ್ಕೂಟ, ಕರ್ನಾಟಕ ರಕ್ಷಣಾ ವೇದಿಕೆ,ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತೆಲಿಗಿ ಹೋಬಳಿ ಘಟಕ ಇವರ ಸಹಯೋಗದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಕನ್ನಡ ನುಡಿ ಕಲರವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ ಪ್ರತಿ 15 ಕಿ.ಮೀ. ಅಂತರದಲ್ಲಿ ವಿಭಿನ್ನವಾಗಿದೆ. ಆಹಾರ ಕ್ರಮ, ಸಂಸ್ಕೃತಿಯಲ್ಲೂ ವಿಶಿಷ್ಟತೆ ಪಡೆದಿದೆ. ಕನ್ನಡ ಒಳ ಹೊರಗಿನ ವಸ್ತು ವಿಶೇಷ, ಸೌಂಧರ್ಯ, ಸಂಪತ್ತು, ಭಾಷಾ ಸೊಗಡು ಪ್ರಪಂಚದ ಗಮನ ಸೆಳೆದಿದೆ ಎಂದರು.
ಸಾನ್ನಿಧ್ಯವಹಿಸಿದ್ದ ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಮಾತನಾಡಿ, ಕನ್ನಡ ನಾಡು, ನುಡಿ ಜಲ ಉಳಿಸುವ ಕೆಲಸ ಮಾಡಬೇಕು. ಕನ್ನಡ ಅಳಿವು-ಉಳಿವು ಯುವಕರ ಕೈಯಲ್ಲಿದೆ. ಸದಾ ಕನ್ನಡ ಬಾವುಟ ರಾರಾಜಿಸಲು ಪ್ರತಿಯೊಬ್ಬರು ಕನ್ನಡ ಪ್ರೀತಿ ಬೆಳೆಸಿಕೊಳ್ಳಬೇಕು ಎಂದರು.
ದಾವಣಗೆರೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ವೀರಭದ್ರಪ್ಪ ಮಾತನಾಡಿದರು. ತೆಲಿಗಿ ಜಡೇಸ್ವಾಮಿ ಮಠದ ಕಿಡಿಗಣ್ಣಯ್ಯ ಸ್ವಾಮಿಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ ಬಾರಿಕರ ಅಧ್ಯಕ್ಷತೆವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ದಿ ಅಧಿಕಾರಿ ಡಿ.ಸುಬ್ರಹ್ಮಣ್ಯ, ತಳವಾರ ಅಂಜಿನಪ್ಪ, ಗುಂಡಿ ಮಂಜುನಾಥ, ತಳವಾರ ನಾಗರಾಜ್, ಅಂಬರೀಶ್, ಎಸ್.ಶಿವಣ್ಣ, ವಿಠಲ್ ಇದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಹಾಡು, ನೃತ್ಯ ಪ್ರದರ್ಶಿಸಿದರು.
