ರಾಮಘಟ್ಟ ದೊಡ್ಡತಾಂಡ : ಕಲ್ಲೇಶ್ವರ ಜಾತ್ರೋತ್ಸವ ಸಂಪನ್ನ

Sirisuddi Kannada
1 Min Read

ಹರಪನಹಳ್ಳಿ: ತಾಲ್ಲೂಕಿನ ರಾಮಘಟ್ಟ ದೊಡ್ಡ ತಾಂಡದ ಪ್ರಸಿದ್ಧ ಕಲ್ಲೇಶ್ವರ ಸ್ವಾಮಿ ಹಾಗೂ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನೆರವೇರಿತು.

ಜಾತ್ರಾ ಮಹೋತ್ಸವದ ಅಂಗವಾಗಿ ತಾಂಡದ ಎಲ್ಲೆಡೆ ವಿದ್ಯುತ್ ದೀಪಾಲಂಕಾರ, ಬಣ್ಣ ಬಣ್ಣದ ತೋರಣ, ಗ್ರಾಮದ ಪ್ರಮುಖ ರಸ್ತೆಗಳು ನವವಧುವಿನಂತೆ ಶೃಂಗಾರಗೊಂಡಿದ್ದವು. ನೆರೆ ಹೊರೆಯ ಜಿಲ್ಲೆಗಳಿಂದ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.ತಾಂಡದ ಹೊರ ವಲಯದಲ್ಲಿರುವ ವಿಶಾಲವಾದ ಮೈದಾನದಲ್ಲಿ ಟೆಂಟ್ ಹಾಕಿಕೊಂಡು ಬೀಡು ಬಿಟ್ಟಿದ್ದ ಭಕ್ತರು ಹರಕೆಯ ಅಡುಗೆ ಮಾಡಿ ದೇವರಿಗೆ ಸಮರ್ಪಿಸಿದರು.

ಸೋಮವರದಿಂದಲೇ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ನೆರೆದಿದ್ದ ಭಕ್ತರ ಜಯಘೋಷ ಮುಗಿಲುಮುಟ್ಟಿತ್ತು. ಜಾತ್ರೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶ್ರೀ ಕಲ್ಲೇಶ್ವರ ಸ್ವಾಮಿ ಹಾಗೂ ಚೌಡೇಶ್ವರಿ ಹೂವಿನ ಹಾರ ಹಾಗೂ ಬಾವುಟವನ್ನು ₹89 ಸಾವಿರಕ್ಕೆ ಹಾರಾಜು ಮಾಡಲಾಯಿತು.

ತೀಜ್ ಹಬ್ಬ: ವರ್ಷದ ಮೊದಲ ಹಬ್ಬವಾಗಿ ಜಾತ್ರೆಯನ್ನು ಬಂಜಾರ ಸಮುದಾಯ ತೀಜ್ (ಗೋಧಿ ಸಸಿ) ಹಬ್ಬವಾಗಿ ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. ತಾಂಡದ ಅವಾಹಿತ ಯುವತಿಯರು ತೀಜ್ ಗಳನ್ನು ಹೊತ್ತು ಸಾಂಪ್ರದಾಯಿಕ ಉಡುಗೆ ತೊಟ್ಟು, ಗೀತೆಗಳನ್ನು ಹಾಡುತ್ತಾ ಕುಣಿದರು. ತೀಜ್ ಸಸಿಗಳನ್ನು ಹೊತ್ತ ಯುವತಿಯರಿಂದ ಕೀಳಲು ಯುವಕರು ಹೊಂಚುಹಾಕಿ ಕುಳಿತಿರುತ್ತದೆ. ಅದರ ರಕ್ಷಣೆಗೆ ಹಿರಿಯರು ನಿಂತಿರುತ್ತಾರೆ. ಅವರನ್ನು ಎದುರಿಸಿ ಯುವಕರು ಸಸಿಗಳನ್ನು ಕಿತ್ತ ಬಳಿಕ ದೇವರಿಗೆ ಅರ್ಪಿಸಿ, ಪರಸ್ಪರ ಹಂಚುವ ಮೂಲಕ ‘ ಉತ್ತಮ ಮಳೆ ಬೆಳೆ ಬಂದು ನಾಡು ಸುಭಿಕ್ಷವಾಗಲಿ ಎಂದು ಹರಸಿದರು.

ಈ ಸಂದರ್ಭದಲ್ಲಿ ಡಿ.ನುರ್ಯನಾಯ್ಕ, ಶೇಖರನಾಯ್ಕ, ಭೋಜ್ಯನಾಯ್ಕ್, ಬಿ. ಸುರೇಶ್ ನಾಯ್ಕ, ಲಿಂಬಾ ನಾಯ್ಮ, ಆರ್.ಶಂಕರ್ ನಾಯ್ಕ, ರವಿ ನಾಯ್ಕ, ಈಶ್ವರ ನಾಯ್ಕ, ಹನುಮಂತನಾಯ್ಕ, ಹಾಲೇಶ್ ನಾಯ್ಕ, ಮಲ್ಲನಾಯ್ಕ್, ವಾಲ್ಯ ನಾಯ್ಕ, ನಾನ್ಯಾನಾಯ್ಕ ಇದ್ದರು.

Share This Article
Leave a Comment